

ವಿಜಯವಾಣಿ ಸುದ್ದಿಜಾಲ ಉಡುಪಿ
ಆಧುನಿಕ ಕಾಲದಲ್ಲಿ ಅನುಸರಿಸುತ್ತಿರುವ ಆಹಾರ ಪದ್ಧತಿ ಹಾಗೂ ಕಲಬೆರಕೆ ಆಹಾರ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದು, ಅವುಗಳಿಗೆ ಆಯುರ್ವೇದ ವೈದ್ಯ ಪದ್ಧತಿ ಸೂಕ್ತ ಪರಿಹಾರವಾಗಿದೆ. ಹೀಗಾಗಿ ಇದನ್ನು ಹೆಚ್ಚು ಬಳಸುವ ಮತ್ತು ಇನ್ನಷ್ಟು ಪ್ರಚಾರ ನೀಡಬೇಕಾದ ಅಗತ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಉಡುಪಿಯ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಧನ್ವಂತರಿ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದವು ನಮ್ಮ ಪೂರ್ವಜರು ನೀಡಿದ ಕೊಡುಗೆಯ ಆಶೀರ್ವಾದವಾಗಿದೆ. ಸಾಂಪ್ರದಾಯಿಕ ವೈದ್ಯ ಪದ್ಧತಿ ಇದಾಗಿದ್ದು, ಅನೇಕ ಪ್ರಕಾರದ ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದ ಪದ್ಧತಿ ನಿರ್ಲಕ್ಷಿಸದೆ ಅದರಿಂದ ದೊರಕುವ ಪ್ರಯೋಜನ ಪಡೆದು ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದರು.
ಕುತ್ಪಾಡಿಯ ಎಸ್ಡಿಎಂ ಕಾಲೇಜ್ ಆಫ್ ಆಯುರ್ವೇದ ಮತ್ತು ಹಾಸ್ಪಿಟಲ್ನ ಉಪನ್ಯಾಸಕಿ ಡಾ. ಧನೇಶ್ವರಿ, ಮಹಿಳಾ ಸಬಲೀಕರಣಕ್ಕಾಗಿ ನಾವೀನ್ಯತೆ ವಿಷಯ ಕುರಿತು ಉಪನ್ಯಾಸ ನೀಡಿದರು. ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಅಧ್ಯಕ್ಷ ಡಾ. ನಾರಾಯಣ್ ಟಿ. ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೆಜಿಎಎಂಒಎ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ನಾಗರಾಜ್, ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಡಾ. ಜಿ.ಶಂಕರ್ ಕಾಲೇಜ್ನ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಡಾ. ಹೇಮಲತಾ ಸ್ವಾಗತಿಸಿದರು. ಡಾ. ಸರ್ವೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವೈದ್ಯಾಧಿಕಾರಿ ಡಾ. ಶ್ಯಾಮರಾವ್ ವಂದಿಸಿದರು. ಆಯುರ್ವೇದ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಧನ್ವಂತರಿ ಜಯಂತಿಯ ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯದಿಂದ 2016ರಿಂದ ಪ್ರತಿವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾದ್ಯಂತ ಅ.21ರಿಂದ 25ರ ವರೆಗೆ "ನಾರೀ ಸಬಲೀಕರಣ ಸಪ್ತಾಹ' ಹಮ್ಮಿಕೊಳ್ಳಲಾಗಿತ್ತು ಎಂದರು.
ನಿತ್ಯದ ಜೀವನದಲ್ಲಿ ಆರೋಗ್ಯಕರ ಅಭ್ಯಾಸ ಹಾಗೂ ಆಹಾರ ಪದ್ಧತಿ ಕುರಿತು ಸಾವಿರಾರು ವರ್ಷದ ಹಿಂದೆಯೇ ಆಯುರ್ವೇದ ಸಮಗ್ರವಾಗಿ ತಿಳಿಸಿಕೊಟ್ಟಿದೆ. ಈ ಚಿಕಿತ್ಸಾ ಪದ್ಧತಿ ಕುರಿತಂತೆ ಸಾರ್ವನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಉತ್ತಮವಾದ ಆಯುರ್ವೇದ ವೈದ್ಯಕಿಯ ಸೌಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು. | ಪ್ರತೀಕ್ ಬಾಯಲ್. ಸಿಇಒ, ಜಿಪಂ ಉಡುಪಿ