ಎತ್ತಿನ ಹೊಳೆ ಬೃಹತ್ ಮೇಲ್ಗಾಲುವೆ ಕಾಮಗಾರಿಗೆ ರಾಷ್ಟ್ರೀಯ ಪ್ರಶಸ್ತಿ

ethina olle
Published on

ಬೆಂಗಳೂರು: ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಕೈಗೊಂಡ ಸುರಕ್ಷತೆ, ಪರಿಸರಸ್ನೇಹಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2025ನೇ ಸಾಲಿನ ಪ್ರತಿಷ್ಠಿತ ಐಐಎನ್ ಪ್ಲಾಟಿನಮ್ ರಾಷ್ಟ್ರೀಯ ಪ್ರಶಸ್ತಿಯು ವಿಶ್ವೇಶ್ವರ ಜಲ ನಿಗಮಕ್ಕೆ ಲಭಿಸಿದೆ.

ಜಲಸಂಪನ್ಮೂಲ ಇಲಾಖೆ ಅಧೀನದ ವಿಶ್ವೇಶ್ವರಯ್ಯ ಜಲನಿಗಮ (ವಿಜೆಎನ್‌ಎಲ್) ಎತ್ತಿಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕೈಗೊಂಡಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಕೌಶಲ ಅಭಿವೃದ್ಧಿ, ತಂತ್ರಜ್ಞಾನ ಆವಿಷ್ಕಾರಕ್ಕೆ ಆದ್ಯತೆ ನೀಡಲುಇನ್ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲಪ್‌ಮೆಂಟ್ ಅಕಾಡೆಮಿ (ಐಐಎನ್) ಸ್ಥಾಪಿಸಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮತ್ತು ಅಧಿಕಾರಿಗಳ ತಂಡ ಪ್ರಶಸ್ತಿ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಶಸ್ತಿ ಫಲಕದೊಂದಿಗೆ ಅಭಿನಂದನೆ ಸಲ್ಲಿಸಿದೆ.

ಗುರುತ್ವಾ ಕಾಲುವೆ ಸರಪಳಿಯ 199.620 ಕಿ.ಮೀ.ನಿಂದ 210.090 ಕಿ.ಮೀ.ವರೆಗೆ ಗುಬ್ಬಿ ತಾಲೂಕಿನ ಚೇಳೂರಲ್ಲಿ 10.47 ಕಿ.ಮೀ. ಉದ್ದದ 3300 ಕ್ಯೂಸೆಕ್ ಸಾಮರ್ಥ್ಯದ ಬೃಹತ್ ಮೇಲ್ಗಾಲುವೆ ನಿರ್ಮಾಣ ಕಾಮಗಾರಿಯನ್ನು ವಿಜೆಎನ್‌ಎಲ್ 2018ರಲ್ಲಿ ಆರಂಭಿಸಿ 2023ರಲ್ಲಿ ಪೂರ್ಣಗೊಳಿಸಿದೆ. ಎತ್ತಿನಹೊಳೆ ಯೋಜನೆಯಲ್ಲಿ ಅಕ್ವಡಕ್ಟೃ್ (ಬೃಹತ್ ಮೇಲ್ಗಾಲುವೆ) ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ 10.47 ಕಿ.ಮೀ ಉದ್ದದ ಗುರುತ್ವಾಕರ್ಷಣ ಕಾಲುವೆ ನಿರ್ಮಾಣ ಮಾಡಲಾಗಿದೆ. 520 ವಿಶೇಷ ಸೇತು ಬಂಧಗಳನ್ನು ನಿರ್ಮಿಸಲಾಗಿದೆ.

ಈ ಯೋಜನೆಯಲ್ಲಿ ಅವಳಿ ತೊಟ್ಟಿಗಳು, ಸರ್ವೀಸ್ ರಸ್ತೆಗಳ ಸಮನ್ವಯತೆ ಸಾಧಿಸಲು ಹೊಸ ವಿನ್ಯಾಸ ರೂಪಿಸಲಾಗಿದೆ.

10.47 ಕಿ.ಮೀ ಉದ್ದದ ಬೃಹತ್ ಮೇಲ್ಗಾಲುವೆ ಕಾಮಗಾರಿ ಪೂರ್ಣಗೊಳಿಸಲು 1162.69 ಕೋಟಿ ರೂ. ಹಾಗೂ ಭೂಸ್ವಾಧೀನಕ್ಕೆ 40.99 ಕೋಟಿ ಸೇರಿ 1203.68 ಕೋಟಿ ರೂ. ವೆಚ್ಚವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net