

Pinarayi Vijayan: 2023ರಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದ್ದ ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಇದು ಕೇರಳಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.
ಚಿತ್ರಕ್ಕೆ ಪ್ರಶಸ್ತಿ ಘೋಷಿಸಿದ ತೀರ್ಪುಗಾರರ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿಎಂ ಪಿಣರಾಯಿ ವಿಜಯನ್, "ಕೋಮುವಾದವನ್ನು ಪ್ರಚೋದಿಸಲು, ಕೇರಳಕ್ಕೆ ಅವಮಾನ ಮಾಡಲು ಯತ್ನಿಸಿದ ಚಿತ್ರಕ್ಕೆ ಪ್ರಶಸ್ತಿ ಘೋಷಿಸುವ ಮೂಲಕ ರಾಷ್ಟ್ರೀಯ ಸಾಮರಷ್ಯ, ಕೋಮು ಸೌಹಾರ್ದತೆಗೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನು ತೀರ್ಪುಗಾರರು ಅಪಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ "ಕೇರಳದ ಮಾನ ಹಾಳು ಮಾಡುವ ಮತ್ತು ಕೋಮು ದ್ವೇಷದ ಬೀಜಗಳನ್ನು ಬಿತ್ತುವ ಸ್ಪಷ್ಟ ಉದ್ದೇಶದಿಂದ, ಸಂಪೂರ್ಣ ತಪ್ಪು ಮಾಹಿತಿಯನ್ನು ಹರಡುವ ಚಲನಚಿತ್ರವನ್ನು ಗೌರವಿಸುವ ಮೂಲಕ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರು, ಸಂಘ ಪರಿವಾರದ ವಿಭಜಕ ಸಿದ್ಧಾಂತದಲ್ಲಿ ಬೇರೂರಿರುವ ನಿರೂಪಣೆಯನ್ನು ಕಾನೂನು ಬದ್ಧಗೊಳಿಸಿದ್ದಾರೆ. ಇದು ಕೋಮು ಶಕ್ತಿಗಳ ವಿರುದ್ಧ ನಿಂತ, ಮತ್ತು ಸಾಮರಸ್ಯದ ಸಂಕೇತವಾಗಿರುವ ಕೇರಳಕ್ಕೆ ಮಾಡಿದ ಅವಮಾನ. ಇದರ ವಿರುದ್ಧ ಮಲಯಾಳಿಗಳು ಅಷ್ಟೇ, ಅಲ್ಲದೇ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಧ್ವನಿ ಎತ್ತಬೇಕು" ಎಂದು ಒತ್ತಾಯಿಸದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಅತ್ಯುತ್ತಮ ಛಾಯಾಗ್ರಹಣ, ನಿರ್ದೇಶಕ ಸುದೀಪ್ತೋ ಸೇನ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ದಿ ಕೇರಳ ಸ್ಟೋರಿ ಸಿನಿಮಾ
2023 ಮೇ 5ರಂದು ಬಿಡುಗಡೆಯಾಗಿದ್ದ ಈ ಚಿತ್ರವನ್ನು ತೀವ್ರ ವಿವಾದ ಹುಟ್ಟು ಹಾಕಿ, ಬಾಕ್ಸ್ ಆಫೀಸ್ನಲ್ಲಿ ಅಧ್ಬುತ ಕಲೆಕ್ಷನ್ ಗಳಿಸಿತ್ತು. ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕ ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಈಗ ಅವರ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಚಿತ್ರದ ಬಜೆಟ್ 15 ರಿಂದ 20 ಕೋಟಿ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ 286.5 ಕೋಟಿ ಗಳಿಸಿದೆ ಎನ್ನಲಾಗಿದೆ.
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಕೇರಳದಿಂದ ಕಾಣೆಯಾದ 32 ಸಾವಿರ ಮಹಿಳೆಯರನ್ನು ಮತಾಂತರ ಮಾಡಿ ನಂತರ ಭಯೋತ್ಪಾದನೆಗೆ ತಳ್ಳಲಾಗಿದೆ. ಜೊತೆತೆ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಮಾಡಿ ಐಸಿಸ್ಗೆ ಮಾರಾಟ ಮಾಡಲಾಗಿದೆ ಎಂದು ಕಥೆಯಲ್ಲಿ ಹೇಳಲಾಗಿದೆ. ಚಿತ್ರಕಥೆ ಸುಳ್ಳು ಎಂದು ಅನೇಕ ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು. ದೇಶನ ಕೆಲವು ರಾಜ್ಯಗಳಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗಿತ್ತು.
ಲೋಕಸಭೆ ಚುನಾವಣೆಯ ಭಾಷಣದಲ್ಲೂ ಪ್ರಧಾನಿ ಮೋದಿ ಸಹ ಈ ಚಿತ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ಎಲ್ಲರೂ ಚಿತ್ರವನ್ನೂ ನೋಡಿ ಎಂದು ಕರೆಕೊಟ್ಟಿದ್ದರು.(ಏಜೆನ್ಸೀಸ್)