ನಾಸೀರ್ ವಶಕ್ಕೆ ಪಡೆದ ಸಿಸಿಬಿ ಪೊಲೀಸರು

Crime Logo
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಟಿ. ನಾಸೀರ್‌ನನ್ನು ಶುಕ್ರವಾರ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಯನ್ನು ಗುರುವಾರ ೮ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಸಿಸಿಬಿ ಎಸಿಪಿ ಕುಮಾರ್ ನೇತೃತ್ವದ ತಂಡ ಜೈಲಿನ ಪ್ರಕ್ರಿಯೆಗಳನ್ನು ಮುಗಿಸಿ ನಾಸೀರ್‌ನನ್ನು ತಮ್ಮ ವಶಕ್ಕೆ ಪಡೆದು ಕೆಎಸ್‌ಆರ್‌ಪಿ ವಾಹನದಲ್ಲಿ ಬಿಗಿ ಭದ್ರತೆಯಲ್ಲಿ ಕರೆ ತರಲಾಗಿದೆ. ನಾಸೀರ್‌ನನ್ನು ಸದ್ಯ ಮಡಿವಾಳದ ಎ್ಎಸ್‌ಎಲ್ ಕೇಂದ್ರದಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ಉಗ್ರರ ವಿಚಾರಣೆ ಹಿನ್ನೆಲೆಯಲ್ಲಿ ಎ್ಎಸ್‌ಎಲ್ ಕೇಂದ್ರಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನಾಸೀರ್ ಸೂಚನೆಯಂತೆ ಬಂಧಿತ ಐವರು ಶಂಕಿತರು ಕೆಲಸ ಮಾಡುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ಕೂಡ ಸಂಗ್ರಹಿಸಿದ್ದರು. ನಾಸೀರ್ ವಿರುದ್ಧ ಜೈಲಿನಲ್ಲಿಯೇ ಉಗ್ರ ಚಟುವಟಿಕೆಗೆ ತರಬೇತಿ ನೀಡಿದ್ದ ಆರೋಪ ಮತ್ತು ಜೈಲಿನಲ್ಲಿಯೇ ಕುಳಿತೆ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ ಆರೋಪಗಳಿವೆ. ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ನಾಸೀರ್ ಎ-೧ ಆರೋಪಿಯಾಗಿದ್ದಾನೆ. ಈತ ಈ ಹಿಂದೆ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಸೇರಿ ೩೬ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆರೋಪಿಯು ಜೈಲಿನಲ್ಲಿ ಕುಳಿತು ನಗರದ ಜನಸಂದಣಿ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net