

ಬೆಂಗಳೂರು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಚಂದ್ರನ ದಕ್ಷಿಣ ದ್ರುವದಲ್ಲಿನಲ್ಲಿರುವ ನೀರಿನ ಅಂಶಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಂಬಂಧ ಮುಂದಿನ ವರ್ಷ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ತಿಳಿಸಿದರು.
ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಬುಧವಾರ ವಿದ್ಯಾರ್ಥಿಗಳೊಂದಿಗೆ ‘ರೀಚಿಂಗ್ ಾರ್ ದಿ ಸ್ಟಾರ್ಸ್: ಎ ಕಾನ್ವರ್‌ಸೇಷನ್ ವಿತ್ ನಾಸಾ ಆೃಂಡ್ ಇಸ್ರೋ’ ಎಂಬ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭಾರತದ ಇಸ್ರೋ ಸಂಸ್ಥೆಯು ಚಂದ್ರದ ದಕ್ಷಿಣ ದ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇಸ್ರೋ ಅಭೂತಪೂರ್ವ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾಸಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಧ್ಯಯನ ನಡೆಸಲಿದೆ ಎಂದು ಹೇಳಿದರು.
ಚಂದ್ರನ ದಕ್ಷಿಣ ದ್ರುವ ಬಗ್ಗೆ ನಾಸಾ ಸಾಕಷ್ಟು ಕುತೂಹಲ ಹೊಂದಿದೆ. ದಕ್ಷಿಣ ದ್ರುವದಲ್ಲಿ ನೀರಿದೆಯೇ ಎಂಬುದನ್ನು ತಿಳಿಯಲು ಅಗೆದು ನೋಡುವ ಪ್ರಯತ್ನಕ್ಕೆ ಮುಂದಾಗಿದೆ. ಆದ್ದರಿಂದ ವೈಜ್ಞಾನಿಕ ಉಪಕರಣಗಳೊಂದಿಗೆ ಕಳುಹಿಸಲಾಗುತ್ತದೆ. ಜಲಜನಕ ಮತ್ತು ಆಮ್ಲಜನಕ ಇರುವುದರಿಂದ ದ್ರುವವು ಅನಿಲ ಕೇಂದ್ರವಾಗಿರಬಹುದು ಎಂಬ ಅಂದಾಜಿಸಲಾಗಿದೆ ಎಂದು ನೆಲ್ಸನ್ ವಿಷಯ ಹಂಚಿಕೊಂಡರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯರನ್ನು ಕಳುಹಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ನೆಲ್ಸನ್, ಇದಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವಿನ ಒಪ್ಪಂದವು ಭಾರತೀಯ ಗಗನಯಾತ್ರಿಗಳಿಗೆ ಸಹಾಯ ಮಾಡಲು ಮತ್ತು ತರಬೇತಿ ನೀಡಲು ನೆರವಾಗಿದೆ. ಯೋಜನೆಯು ನಿರೀಕ್ಷೆಗಿಂತ ಸ್ವಲ್ಪ ವಿಳಂಬವಾಗಲಿದ್ದು, 2024ರ ಕೊನೆಗೆ ಸಾಕಾರಗೊಳ್ಳುವ ಸಾಧ್ಯತೆಗಳಿವೆ ಎಂದರು.
ಬಾಹ್ಯಾಕಾಶ ಪರಿಶೋಧಕರು ತಮ್ಮ ರಾಜಕೀಯ, ಧಾರ್ಮಿಕ ಮತ್ತು ಜನಾಂಗೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಭೂಮಾತೆಯ ಕಾರಣಕ್ಕಾಗಿ ಒಗ್ಗೂಡುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಂವಾದದಲ್ಲಿ ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಶಂತನು ಭಟಾವಡೇಕರ್, ವಿಂಗ್ ಕಮಾಂಡರ್ ರಾಕೇಶ್ ಶರ್ಮಾ, ಅಮೆರಿಕ ದೂತವಾಸ ಕೇಂದ್ರ (ಚೆನ್ನೈ)ವಕ್ತಾರೆ ಸಮಂತಾ ಜಾಕ್ಸನ್ ಮತ್ತು ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ. ಸಾಧನಾ ಉಪಸ್ಥಿತರಿದ್ದರು.