

ರಾಣೆಬೆನ್ನೂರ: ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಹಲಗೇರಿ ಗ್ರಾಮದ ಮೋದಿ ಹೋಟೆಲ್‌ನವರು ಜನರಿಗೆ ಉಚಿತವಾಗಿ ಹೋಳಿಗೆ ಊಟ ಬಡಿಸುವ ಸಂಭ್ರಮ ಆಚರಿಸಿದರು.
ಹೋಟೆಲ್ನ ಆವರಣದಲ್ಲಿ ಬೆಳಗ್ಗೆ 12 ಗಂಟೆಗೆ ನರೇಂದ್ರ ಮೋದಿಯವರ ಹೆಸರಿನಲ್ಲಿ ಊಟ ವಿತರಣೆ ಆರಂಭಿಸಿದ ಹೋಟೆಲ್‌ನವರು ಜನರಿಗೆ ಹೋಳಿಗೆ, ಎರಡು ತರಹದ ಪಲ್ಲೆ ಹಾಗೂ ರೊಟ್ಟಿ, ಅನ್ನ-ಸಾಂಬಾರ ಬಡಿಸಿದರು. 4 ಸಾವಿರಕ್ಕೂ ಅಧಿಕ ಜನ ಸರದಿ ಸಾಲಿನಲ್ಲಿ ನಿಂತು ಊಟ ಮಾಡಿದರು.
ಮೋದಿ ಪರ ಘೋಷಣೆ…
ಊಟ ಬಡಿಸುವ ಸಮಯದಲ್ಲಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ಜೈ ಎನ್ನುವ ಘೋಷಣೆ ಮೊಳಗಿದವು. ಊಟ ಮಾಡಿದ ಜನತೆ ಕೂಡ ಹೋಟೆಲ್ ಮಾಲೀಕರನ್ನು ಹರಿಸಿ ತೆರಳಿದರು.
ಹೋಟೆಲ್ ಮಾಲೀಕ ವೀರೇಶ ಉಜ್ಜನಗೌಡ್ರ, ಜಿಪಂ ಮಾಜಿ ಸದಸ್ಯ ಎಸ್.ಎಸ್. ರಾಮಲಿಂಗಣ್ಣನವರ, ಶಿವಪುತ್ರಪ್ಪ ಹರಿಯಾಳದವರ, ಸಿದ್ದಲಿಂಗನಗೌಡ್ರ ಪಾಟೀಲ, ಸುರೇಶ ಮಲ್ಲಗೌಡ್ರ, ಶಿವು ಕಣ್ಣಪ್ಪಳವರ ಮತ್ತಿತರರು ಪಾಲ್ಗೊಂಡಿದ್ದರು.