ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲು ಕೇಂದ್ರ ನಿರಾಕರಣೆ; ಕಾರಣವೇನು ಗೊತ್ತಾ?

Untitled-design-57
Published on

ನವದೆಹಲಿ: ಬಿಹಾರ ರಾಜ್ಯಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಮಾತನಾಡಿ, ಈ ಹಿಂದೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಕೆಲವು ರಾಜ್ಯಗಳಿಗೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿತ್ತು. ಆದರೆ ಇದರ ಹಿಂದೆ ಹಲವು ಕಾರಣಗಳಿವೆ ಎಂದು ತಿಳಿಸಿದರು.

ವಿಶೇಷ ಸ್ಥಾನಮಾನವನ್ನು ಪಡೆದ ರಾಜ್ಯಗಳಲ್ಲಿ ಗುಡ್ಡಗಾಡು ಮತ್ತು ಕಷ್ಟಕರವಾದ ಭೂಪ್ರದೇಶ, ಕಡಿಮೆ ಜನಸಂಖ್ಯಾ ಸಾಂದ್ರತೆ ಅಥವಾ ಹೆಚ್ಚಿನ ಪ್ರಮಾಣದ ಬುಡಕಟ್ಟು ಜನಸಂಖ್ಯೆ, ನೆರೆಯ ದೇಶಗಳ ಗಡಿಯಲ್ಲಿನ ಆಯಕಟ್ಟಿನ ಸ್ಥಳ, ಆರ್ಥಿಕ ಮತ್ತು ಮೂಲಭೂತ ಮೂಲಸೌಕರ್ಯಗಳು ಹಿಂದುಳಿದಿರುವಿಕೆ ಮತ್ತು ರಾಜ್ಯದ ಹಣಕಾಸಿನ ಕಾರ್ಯಸಾಧ್ಯವಲ್ಲದ ಸ್ವರೂಪವನ್ನು ಒಳಗೊಂಡಿವೆ. ಇದರ ಆಧಾರದ ಮೇಲೆ ಕೆಲವು ರಾಜ್ಯಗಳಿಗೆ ವಿಶೇಷ ರಾಜ್ಯ ಸ್ಥಾನಮಾನ ನೀಡಲಾಗಿದೆ ಎಂದು ವಿವರಿಸಿದರು.

ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರದ ಹಿಂದಿನ ಮನವಿಯನ್ನು ಇಂಟರ್-ಮಿನಿಸ್ಟ್ರೀಯಲ್ ಗ್ರೂಪ್ (IMG) ಪರಿಗಣಿಸಿತ್ತು. ಅದು 2012 ಮಾರ್ಚ್ 30ರಂದು ತನ್ನ ವರದಿಯನ್ನು ಸಲ್ಲಿಸಿದೆ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ NDC ಮಾನದಂಡಗಳನ್ನು ಆಧರಿಸಿ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನದ ಪ್ರಕರಣವನ್ನು ಮಾಡಲಾಗಿಲ್ಲ ಎಂದು ಐಎಮ್​ಜಿ ತೀರ್ಮಾನಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮನೋಜ್ ಕುಮಾರ್ ಝಾ ಅವರು ಬಿಹಾರ ವಿಶೇಷ ರಾಜ್ಯ ಸ್ಥಾನಮಾನ ಮತ್ತು ವಿಶೇಷ ಪ್ಯಾಕೇಜ್ ಎರಡನ್ನೂ ಬಯಸುತ್ತದೆ ಎಂದು ಕೇಳಿದ್ದರು. ಬಿಹಾರ ಮತ್ತು ಜಾರ್ಖಂಡ್ ವಿಭಜನೆ ಆದಾಗಿನಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇದೆ ಎಂದು ಅವರು ಹೇಳಿದರು.

ವಿಶೇಷ ಸ್ಥಾನಮಾನವು ಹಿಂದುಳಿದ ರಾಜ್ಯಕ್ಕೆ ಅದರ ಬೆಳವಣಿಗೆಯನ್ನು ವೇಗಗೊಳಿಸಲು ಹೆಚ್ಚಿನ ಕೇಂದ್ರ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ಸಂವಿಧಾನವು ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿಲ್ಲ. ಇದನ್ನು 1969ರಲ್ಲಿ ಐದನೇ ಹಣಕಾಸು ಆಯೋಗದ ಶಿಫಾರಸುಗಳ ಮೇಲೆ ಪರಿಚಯಿಸಲಾಯಿತು. ಇದುವರೆಗೆ ಜಮ್ಮು ಮತ್ತು ಕಾಶ್ಮೀರ (ಈಗ ಕೇಂದ್ರಾಡಳಿತ ಪ್ರದೇಶ), ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯಗಳು ವಿಶೇಷ ಸ್ಥಾನಮಾನವನ್ನು ಪಡೆದಿರುವ ರಾಜ್ಯಗಳಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net