

Narendra Modi China Visit: ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ನಂತರ ಚೀನಾಗೆ ಭೇಟಿ ನೀಡಲಿದ್ದು, ಟಿಯಾಂಜಿನ್ನಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
2025 ರ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಹೊರತಾಗಿ ನಡೆಯುತ್ತಿರುವ ಈ ಸಭೆ ವಿಶ್ವದ ಗಮನ ಸೆಳೆದಿದ್ದು, ಭಾರತ ಮತ್ತು ಅಮೆರಿಕಾ ನಡುವಿನ ಸುಂಕ ಸಮರದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಟಿಯಾಂಜಿನ್ನಲ್ಲಿ ನಡೆಯುವ SCO ಶೃಂಗಸಭೆಯು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ 20 ಕ್ಕೂ ಹೆಚ್ಚು ವಿಶ್ವ ನಾಯಕರನ್ನು ಮತ್ತು ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ನಾಯಕರನ್ನು ಒಟ್ಟುಗೂಡಿಸುತ್ತದೆ. ಚೀನಾಕ್ಕೆ, ಈ ಸಭೆಯು ಜಾಗತಿಕ ದಕ್ಷಿಣದ ತನ್ನ ನಾಯಕತ್ವವನ್ನು ಪ್ರದರ್ಶಿಸಲು ಮತ್ತು ರಷ್ಯಾಕ್ಕೆ ರಾಜತಾಂತ್ರಿಕ ರಕ್ಷಣೆಯನ್ನು ನೀಡಲು ಒಂದು ಅವಕಾಶವಾಗಿದ್ದು, ಭಾರತಕ್ಕೆ, ಇದು ಬಹುಪಕ್ಷೀಯ ವೇದಿಕೆಗಳಿಗೆ ತನ್ನ ನಿರಂತರ ಬದ್ಧತೆಯನ್ನು ಸೂಚಿಸಲು ಮತ್ತು ಬದಲಾಗುತ್ತಿರುವ ಜಾಗತಿಕ ಹೊಂದಾಣಿಕೆಗಳ ನಡುವೆ ಸಮತೋಲನ ಶಕ್ತಿಯಾಗಿ ತನ್ನನ್ನು ತಾನು ಇರಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.
ಚೀನಾದೊಂದಿಗಿನ ಭಾರತದ ಸಂಬಂಧಗಳು ಕೂಡ ಹೇಳಿಕೊಳ್ಳುವ ರೀತಿ ಇಲ್ಲದಿದ್ದರೂ, ಒಂದು ವರ್ಷದ ಬಳಿಕ ನಡೆಯುತ್ತಿರುವ ಉಭಯ ನಾಯಕರ ಮುಖಾಮುಖಿ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 2020 ರ ಜೂನ್ನಲ್ಲಿ ನಡೆದ ಮಾರಕ ಗಾಲ್ವಾನ್ ಕಣಿವೆ ಘರ್ಷಣೆಗಳ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು, ಆದರೆ ಮಿಲಿಟರಿ ಮತ್ತು ರಾಜತಾಂತ್ರಿಕ ಚರ್ಚೆಗಳ ಬಳಿಕ ಘರ್ಷಣೆ ಬಿಂದುಗಳಿಂದ ಪರಸ್ಪರ ಹಿಂದೆ ಸರಿಯಲು ಕಾರಣವಾಯಿತು.
ಭಾರತ, ಚೀನಾ, ರಷ್ಯಾದಂತಹ ಬಲಾಡ್ಯ ರಾಷ್ಟ್ರಗಳು ಒಟ್ಟಿಗೆ ಸೇರುತ್ತಿರುವುದು ಟ್ರಂಪ್ ಕಣ್ಣು ಕೆಂಪಾಗಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.(ಏಜೆನ್ಸೀಸ್)