

ಸಾಗರ: ಸ್ವಾತಂತ್ರಾೃನಂತರದಲ್ಲಿ ಪುರುಷ-ಮಹಿಳೆಯರಿಗೆ ಸಮಾನ ವೇತನ ನೀಡಿದ ಸರ್ಕಾರದ ಮೊಟ್ಟ ಮೊದಲ ಯೋಜನೆ ಉದ್ಯೋಗಖಾತ್ರಿ. ಈ ಯೋಜನೆಯಿಂದ ಮಾನವ ಸಂಪನ್ಮೂಲದ ಸದ್ಬಳಕೆಯೂ ಆಯಿತು. ಗ್ರಾಮಗಳೂ ಅಭಿವೃದ್ಧಿಯಾದವು. ಊರಿನ ಶಾಲೆಗೆ ಕಾಂಪೌಂಡ್, ಶೌಚಗೃಹ, ಚರಂಡಿ ಎಲ್ಲ ಸೌಲಭ್ಯಗಳೂ ಸಿಕ್ಕವು. ಇದಕ್ಕಾಗಿ ದುಡಿವ ಕೈಗಳು ಟೊಂಕ ಕಟ್ಟಿ ನಿಂತವು. ಇದರಿಂದ ಗ್ರಾಮಗಳು ಉದ್ಧಾರವಾದವು. ಕುಟುಂಬಗಳು ಸಹ ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಇಟ್ಟವು.
ಮಲೆನಾಡಿನಲ್ಲಿ ತೋಟ, ಗದ್ದೆಗಳಿದ್ದರೂ ಬಹು ಬೆಳೆ ಪದ್ಧತಿ ಆಲೋಚನೆ ಮಾಡುವವರ ಸಂಖ್ಯೆ ಕಡಿಮೆ. ಆದರೆ ಸಾಗರ ತಾಲೂಕಿನ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣೂರಿನ ಮಂಜುನಾಥ್ ಎಂಬ ಸಣ್ಣ ರೈತ ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಪಡೆದು ಶೆಡ್ ನಿರ್ಮಿಸಿ, ಕುರಿ ಸಾಕಣೆ ಮಾಡಿ ಬದುಕು ಕಟ್ಟಿಕೊಂಡಿದ್ದಾನೆ.
ಮಂಜುನಾಥ್ 100ಕ್ಕೂ ಅಧಿಕ ಕುರಿಗಳನ್ನು ಸಾಕಿದ್ದಾನೆ. ಟಗರು ಮತ್ತು ಸ್ಥಳೀಯ ಮೇಕೆ ತಳಿಗಳು ಇವರ ಕೊಟ್ಟಿಗೆಯಲ್ಲಿವೆ. ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಿಸಿರುವುದರಿಂದ ಕುರಿ ಸಾಕಣೆಗೆ ಹೆಚ್ಚು ಅನುಕೂಲವಾಗಿದೆ. ಕುರಿ ಮಾರಾಟವೂ ಉತ್ತಮವಾಗಿದೆ. ಕುರಿ ಗೊಬ್ಬರವೂ ಉತ್ಪತ್ತಿಯಾಗುತ್ತಿದ್ದು, ಇದಕ್ಕೆ ಬಹು ಬೇಡಿಕೆ ಇದೆ. ಮಂಜುನಾಥ್ ಗದ್ದೆ ಕೆಲಸದ ಮಧ್ಯೆ ಉಪ ಕಸುಬು ಆರಂಭಿಸಿ ಆದಾಯ ಪಡೆದು ಯಶಸ್ವಿಯಾಗಿದ್ದಾರೆ.
ಕೃಷಿಕನಾದ ಮಂಜುನಾಥ್‌ಗೆ ಆರಂಭದಲ್ಲಿ ಕುರಿಗಳ ಕುರಿತು ಹೆಚ್ಚು ಮಾಹಿತಿ ಇರಲ್ಲಿಲ್ಲ. ಸರ್ಕಾರದ ಇಲಾಖೆಗಳಿಂದ ಈ ಬಗ್ಗೆ ತಿಳಿವಳಿಕೆ ಪಡೆದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕುಟುಂಬವೂ ಕುರಿ ಸಾಕಣೆ ಕಾರ್ಯಕ್ಕೆ ಕೈ ಜೋಡಿಸಿದೆ. ಹೊಲ, ಗದ್ದೆಗಳಲ್ಲಿ ಕುರಿ ನಿಲ್ಲಿಸಲು ಕೂಡ ಹಣ ಪಡೆದು ಆದಾಯ ಗಳಿಸುತ್ತಿದ್ದಾರೆ.
ಮಂಜುನಾಥ್ ನರೇಗಾ ಯೋಜನೆಯಡಿ ಕುರಿ ಕೊಟ್ಟಿಗೆ ನಿರ್ಮಾಣಕ್ಕೆ 70 ಸಾವಿರ ರೂ. ಸಹಾಯಧನ ಪಡೆದು ಯಶಸ್ಸಿನತ್ತ ಸಾಗಿದ್ದಾರೆ. 100ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಇವರ ಶ್ರಮ ಇತರರಿಗೆ ಮಾದರಿ. ಮಲೆನಾಡಿನಲ್ಲಿ ಬಹುಮುಖಿ ಚಿಂತನೆ ಮೂಲಕ ಕೃಷಿ, ಉಪ ಕಸುಬು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಸಾಗರ ತಾಪಂ ಇಒ ಬಿ.ಎಲ್.ಶಿವಪ್ರಕಾಶ್.