ನರೇಗಾ ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ: ಪಿಡಿಒಗಳ ವಿರುದ್ಧ ಗ್ರಾಪಂ ಅಧ್ಯಕ್ಷರು, ಸದಸ್ಯರ ಆರೋಪ  ತನಿಖಾ ವರದಿ ನೆಪವೊಡ್ಡಿ ಕಾಲಹರಣ

4 bgp narega news photo (1)
Published on

ಬಾಗೇಪಲ್ಲಿ : ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರೇ ಪಿಡಿಒಗಳ ವಿರುದ್ಧ ದಾಖಲೆ ಸಮೇತ ಜಿಪಂ ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರೂ ಅಕ್ರಮಗಳ ತನಿಖೆ ನಡೆಸುವ ನೆಪವೊಡ್ಡಿ ಪಿಡಿಒಗಳನ್ನು ರಕ್ಷಿಸಿಕೊಳ್ಳುವ ತಂತ್ರಗಾರಿಕೆಗೆ ಜಿಪಂ ಮುಂದಾಗಿದೆ.

ಘಂಟವಾರಪಲ್ಲಿ, ನಾರೇಮದ್ದೇಪಲ್ಲಿ, ದೇವರಗುಡಿಪಲ್ಲಿ, ಪಾತಪಾಳ್ಯ ಹಾಗೂ ಎಂ.ನಲ್ಲಗುಟ್ಲಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 13 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಅನುದಾನ ದುರ್ಬಳಕೆ ಮಾಡಿರುವ ಪಿಡಿಒಗಳ ವಿರುದ್ಧ ದಾಖಲೆಗಳ ಸಮೇತ ಗ್ರಾಪಂ ಅಧ್ಯಕ್ಷರು, ಸದಸ್ಯರು ಜಿಪಂ ಸಿಇಒ ಮತ್ತು ತಾಪಂ ಇಒಗೆ ಲಿಖಿತ ದೂರು ಸಲ್ಲಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿರುವ ತಾಪಂ ಅಧಿಕಾರಿಗಳು ಅಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿದೆ, ತನಿಖಾ ವರದಿ ಬಂದ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ತನಿಖಾ ವರದಿ ನೆಪವೊಡ್ಡಿ ಕಾಲಹರಣ ಮಾಡಿ ಗ್ರಾಪಂಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುತ್ತಿದ್ದಾರೆ.

ಕೃಷಿ ಮತ್ತು ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಗಟ್ಟಲು ಹಾಗೂ ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆಗಳೊಂದಿಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶಕ್ಕಾಗಿ ಅನುಷ್ಠಾನಗೊಳಿಸಿರುವ ನರೇಗಾ ಕಾಮಗಾರಿಗಳ ಮಾನವ ದಿನಗಳಿಗೆ ಜನರನ್ನು ಬಳಸುವುದು ಕಡ್ಡಾಯ. ಆದರೇ ತಾಲೂಕಿನ ಸ್ಥಳೀಯ ರಾಜಕೀಯ ಬಲಾಢ್ಯರು ಜೆಸಿಬಿ ಬಳಸಿ ನರೇಗಾ ಹಣ ಲೂಟಿ ಮಾಡುತ್ತಿದ್ದಾರೆ. ನರೇಗಾ ಮೇಟಿ, ಇಂಜಿನಿಯರ್ ಹಾಗೂ ಪಿಡಿಒಗಳು ಗುತ್ತಿಗೆದಾರರೊಂದಿಗೆ ಸೇರಿ ನಕಲಿ ಕಾಮಗಾರಿಯ ೆಟೋಗಳನ್ನು ಬಳಸಿ ಅಕ್ರಮ ಬಿಲ್ ಮಾಡಿ ಸರ್ಕಾರದ ಹಣ ದುರ್ಬಳಕೆ ಮಾಡುತ್ತಿದ್ದಾರೆ.

ನಾರೇಮದ್ದೇಪಲ್ಲಿ, ಪಾತಪಾಳ್ಯ ಮತ್ತು ದೇವರಗುಡಿಪಲ್ಲಿ ಗ್ರಾಪಂಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ, ತನಿಖೆ ನಡೆಸುವಂತೆ ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದ್ದು ಇಲಾಖೆ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುತ್ತಿದೆ, ಜಿಪಂ ಅಧಿಕಾರಿಗಳ ತನಿಖಾ ವರದಿಯಂತೆ ತಪ್ಪಿತಸ್ಥ ಪಿಡಿಒಗಳ ವಿರುದ್ಧ ಕ್ರಮ ಜರುಗಿಸುತ್ತೇವೆ. ಎಸ್.ಎನ್.ಮಂಜುನಾಥಸ್ವಾಮಿ, ತಾಪಂ ಇಒ, ಬಾಗೇಪಲ್ಲಿ. ಘಂಟವಾರಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಎರಡು ಕಾಮಗಾರಿಗಳು ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ಬಿಲ್ ಮಾಡುವುದಿಲ್ಲ. ನರೇಗಾ ಕಾಮಗಾರಿಗೆ ಜೆಸಿಬಿ ಬಳಸುವಂತೆ ಯಾರಿಗೂ ಅನುಮತಿ ನೀಡಿಲ್ಲ, ಕೂಲಿ ಕಾರ್ಮಿಕರಿಗೆ ನೀಡಿರುವ ಕಾಮಗಾರಿಯನ್ನು ಕಾರ್ಮಿಕರೇ ಮಾಡುವುದು ಕಡ್ಡಾಯವಾಗಿದೆ. ನಾರಾಯಣಸ್ವಾಮಿ, ಪಿಡಿಒ ಘಂಟವಾರಪಲ್ಲಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net