

ತಿ.ನರಸೀಪುರ : ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಹತ್ತಿರದಿಂದಲೇ ಅರಿತಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಸಮಾಜ ಸುಧಾರಕರು ಎಂದು ಜಿಲ್ಲಾ ಆರ್ಯ ಈಡಿಗರ ಯುವ ವೇದಿಕೆಯ ಡಾ.ರಾಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ 170 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನಲ್ಲಿ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಬಸವಣ್ಣನಂತೆ ಕೇರಳದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಹೋರಾಟ ನಡೆಸಿದ ನಾರಾಯಣ ಗುರು ಅವರಿಂದಲೇ ಆ ರಾಜ್ಯಕ್ಕೆ ದೇವರನಾಡು ಎಂಬ ಹೆಸರು ಬಂದಿದೆ ಎಂದರು.
ಜಾಗೃತಿ ಮೂಲಕ ಹಿಂದುಳಿದವರನ್ನು, ಶೋಷಿತ ಜನರನ್ನ ಒಟ್ಟುಗೂಡಿಸಿದ ನಾರಾಯಣ ಗುರು ಅವರು ಧಾರ್ಮಿಕತೆಯಲ್ಲೂ ಸಮಾನತೆಯ ಹಕ್ಕನ್ನ ಪ್ರತಿಪಾದಿಸಿದರು. ಮಹಿಳೆಯರು ಸಮಾನತೆಯ ಬದುಕನ್ನು ನಡೆಸಬೇಕೆಂಬ ಆಸೆಯನ್ನು ಹೊಂದಿದ್ದರು ಎಂದು ಡಾ.ರಾಜು ತಿಳಿಸಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ವಚನಕಾರ ಬಸವಣ್ಣ, ಕೀರ್ತನೆಕಾರ ಕನಕದಾಸರು ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಂತೆಯೇ ನಾರಾಯಣಗುರು ಅವರು ಪ್ರಬುದ್ಧ ಭಾರತದಲ್ಲಿ ಎಲ್ಲಾ ವರ್ಗದ ಜನರು ಸಮಾನತೆಯ ಬದುಕನ್ನು ನಡೆಸಬೇಕೆಂದು ಬಯಸಿ, ಹೋರಾಟವನ್ನು ನಡೆಸಿ ಮಹಾತ್ಮರಾಗಿದ್ದಾರೆ ಎಂದು ಬಣ್ಣಿಸಿದರು.
ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಿರಗಸೂರು ಶಂಕರ್, ಮಾಜಿ ಅಧ್ಯಕ್ಷ ವಿ.ವಾಸುದೇವ್, ಗೌರವ ಅಧ್ಯಕ್ಷ ಸಿದ್ದರಾಜು, ಉಪಾದ್ಯಕ್ಷ ಬೃಂದಾ ಆಸ್ಪತ್ರೆಯ ಗುರು, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್, ಪ್ರಶಾಂತ್ ಈಡಿಗರ್, ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಪುಟ್ಟಯ್ಯ, ಮಾಜಿ ಅಧ್ಯಕ್ಷ ಮೂಗೂರು ಎಂ.ಸಿದ್ದರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಬಿ.ಮನ್ಸೂರ್ ಅಲಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಅಧಿಕಾರಿಗಳಾದ ಕೆ.ಎಸ್. ಸುವಾಸಿನಿ, ವಸಂತಕುಮಾರಿ, ಹೇಮಂತ್ ಕುಮಾರ್, ಮುಖಂಡರಾದ ಅನಂತು, ಪ್ರಸಾದ್ ನಾಯಕ್, ಎಚ್.ನಾಗರಾಜು ಇತರರು ಇದ್ದರು.