ಹಾವೇರಿ: ನಾರಾಯಣ ಗುರುಗಳ ಅವರ ಜೀವನ ಚರಿತ್ರೆ, ತತ್ವ ಮತ್ತು ವಿಚಾರಧಾರೆಗಳು ಇಂದಿನ ಸಮಾಜದ ಉತ್ತಮ ಬದುಕಿಗೆ ಉಪಯುಕ್ತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ, ಯುವ ಸಮೂಹ ನಮ್ಮ ದೇಶ, ಸಂಸ್ಕೃತಿ ಹಾಗೂ ನಮ್ಮ ಪರಂಪರೆಯ ನಿರ್ಮಾಪಕ ಜೀವನ ಕ್ರಮಗಳನ್ನು ಅಧ್ಯಯನಮಾಡಬೇಕು. ಸರ್ವಜ್ಞ, ಮಡಿವಾಳ ಮಾಚಯ್ಯ, ಅಕ್ಕಮಹಾದೇವಿ, ನಾರಾಯಣ ಗುರುಗಳಂತಹ ಸಹಸ್ರಾರು ಮಹನೀಯರ ಜೀವನ ಚರಿತ್ರೆ ಹಾಗೂ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಕ ವೆಂಕಟೇಶ ಈಡಿಗ ಮಾತನಾಡಿ, ಮಹನೀಯರ ಜಯಂತಿಗಳನ್ನು ಒಂದು ಸಮುದಾಯಕ್ಕೆ ಸೀಮಿತ ವಾಗದೆ, ಜನ ಸಾಮನ್ಯ ಜಯಂತಿಯಾಗಬೇಕು. ನಾರಾಯಣ ಗುರುಗಳ ವಿಚಾರಧಾರೆಗಳಿಗೆ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ. ಅವರು ಮೌನಕ್ರಾಂತಿಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸಮಾಜ ಪರಿವರ್ತನೆಗೆ ಶ್ರಮಿಸಿದರು ಎಂದರು.
ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ಪರಶುರಾಮ ಎಚ್., ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಗುರುಗಳ ಜೀವನ ಸಾರುವ ಕಿರು ಪುಸ್ತಕ ಮಹಾಶಕ್ತಿ ನಾಟಕ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಎಚ್.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಪ್ರಿಯಾ ರೊಡ್ಡನವರ, ರಶ್ಮಿ ರೊಡ್ಡನವರ, ಸಮಾಜ ಮುಖಂಡರಾದ ಮಾರುತಿ ಈಡಿಗ ತಿಳುವಳ್ಳಿ, ಮಂಜುನಾಥ ಗುದ್ಲೆಪ್ಪ ಈಡಿಗರ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಇತರರು ಉಪಸ್ಥಿತರಿದ್ದರು.