

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಭರವಸೆ l ಸ್ಥಳಕ್ಕೆ ಭೇಟಿ, ಪರಿಶೀಲನೆ
ಚನ್ನಗಿರಿ: ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಭರವಸೆ ನೀಡಿದರು.
ಶಾಲೆ ಆರಂಭಕ್ಕೆ ಆಗ್ರಹಿಸಿ ಗ್ರಾಮಸ್ಥರು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾದ ಕಾರಣಕ್ಕೆ 2017ರಲ್ಲಿ ಶಾಲೆಗೆ ಬೀಗ ಹಾಕಲಾಗಿತ್ತು. ಆದರೆ, ಅದು ಶಾಶ್ವತವಾಗಿ ಮುಚ್ಚಿಲ್ಲ. ಗ್ರಾಮಸ್ಥರು ಶಾಲೆ ಉಳಿಸಿಕೊಳ್ಳಲು ಮುಂದೆ ಬಂದಿರುವುದು ಸಂತಸ ತಂದಿದೆ. ಶಿಕ್ಷಣ ಇಲಾಖೆ ನುರಿತ ಶಿಕ್ಷಕರನ್ನು ನೇಮಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ನಿಮ್ಮ ಗ್ರಾಮ, ನಿಮ್ಮ ಮಕ್ಕಳು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಗ್ರಾಮದ ಶಾಲೆಯಲ್ಲಿ ವ್ಯವಸ್ಥಿತವಾದ ಆರು ಕೊಠಡಿಗಳಿವೆ. ನಾಲ್ಕು ಕೊಠಡಿಗಳು ದುರಸ್ತಿಯಾಗಬೇಕಿದೆ. ಅಡುಗೆ ಕೋಣೆ ಹಾಗೂ ಶೌಚಗೃಹಗಳು ಉತ್ತಮವಾಗಿವೆ. ಶಾಲೆ ಆರಂಭದ ವರದಿ ಉಪನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ. ಸದ್ಯದಲ್ಲೇ ಬಿಸಿಯೂಟದೊಂದಿಗೆ ಶಾಲೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ನಾಗರಾಜ್ ಮಾತನಾಡಿ, 90 ವರ್ಷ ಇತಿಹಾಸ ಹೊಂದಿರುವ ಶಾಲೆ ಇದಾಗಿದೆ. ಶಾಲೆಗೆ ಬೇಕಾದ ಎಲ್ಲ ಸೌಕರ್ಯವನ್ನು ಗ್ರಾಪಂನಿಂದ ಮಾಡಿಕೊಡಲಾಗುತ್ತದೆ. ಶಾಲೆಗೆ ಸುಣ್ಣ ಬಣ್ಣ ಬಳಿಸಲಾಗುತ್ತದೆ. ಈಗಾಗಲೇ ಗ್ರಾಮದಲ್ಲಿ 11 ವಿದ್ಯಾರ್ಥಿಗಳು ಚನ್ನಗಿರಿ ಶಾಲೆಗೆ ಹೋಗುತ್ತಿದ್ದಾರೆ. ಎಲ್ಲರನ್ನು ಮತ್ತೆ ಶಾಲೆಗೆ ದಾಖಲಾತಿ ಮಾಡಿಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕೆಲಸ ಗ್ರಾಮಸ್ಥರು ಒಗ್ಗೂಡಿ ಮಾಡಲಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಸಿಆರ್‌ಪಿ ಕರಿಸಿದ್ದಪ್ಪ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಗ್ರಾಮಸ್ಥರಾದ ಮಂಜಪ್ಪ, ರಂಗಪ್ಪ, ರವಿಕುಮಾರ್, ಬಿ. ರಾಜಪ್ಪ, ವೀಣಾ, ರೇಖಾ, ಸುಧಾ, ತಿಪ್ಪೇಶ್ ಪಟೇಲ್, ಲಕ್ಷ ್ಮಣ, ಕೆ. ಮಹೇಶ್ವರಪ್ಪ, ಅಣ್ಣಪ್ಪ, ನಿಂಗಪ್ಪ ಇತರರಿದ್ದರು.