ನಂಜನಗೂಡಿನಲ್ಲಿ ರಾತ್ರಿಯಿಡಿ ಶಿವಧ್ಯಾನ

22NGD4
Published on

ನಂಜನಗೂಡು: ಶಿವರಾತ್ರಿ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮುಂಭಾಗದ ಆವರಣಲ್ಲಿ ಶುಕ್ರವಾರ ರಾತ್ರಿಯಿಡಿ ಸಹಸ್ರಾರು ಭಕ್ತರು ಜಾಗರಣೆ ಮಾಡಿ ಶಿವಧ್ಯಾನ ಮಾಡಿದರೆ, ಅತ್ತ ಶಿವನಾಮ ಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು.
ಶುಕ್ರವಾರ ಸಂಜೆಯಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಮುಂಜಾನೆವರೆಗೂ ನಿರಂತರವಾಗಿ ನಡೆಯಿತು. ಕೆ.ವೇಣು ತಂಡದ ಸ್ಯಾಕ್ಸೋಫೋನ್ ವಾದನ, ಪ್ರಸಾದ ತಂಡದ ನಾದಸ್ವರ, ಎಂ.ವಿ.ಗೋವಿಂದರಾಜು ಹಾಗೂ ರಾಣಿ ತಂಡ ನಡೆಸಿಕೊಟ್ಟ ಭಕ್ತಿಗೀತೆಗಳ ಗಾಯನ ಶಿವಧ್ಯಾನದಲ್ಲಿ ತೇಲಿಸಿತು.

ಬೆಂಗಳೂರಿನ ಭರತಾಂಜಲಿ ನಾಟ್ಯಶಾಲೆಯ ಸೀತಾಗುರುಪ್ರಸಾದ ತಂಡ ಹಾಗೂ ಕಲಾಸಂದೇಶ ಪ್ರತಿಷ್ಠಾನ ತಂಡ ಭರತನಾಟ್ಯ ಪ್ರದರ್ಶನದೊಂದಿಗೆ ಶಿವ ತಾಂಡವ ಅವತಾರ ಅನಾವರಣಗೊಳಿಸಿ ಭಕ್ತರ ಕಣ್ಮನ ತಣಿಸಿತು. ತಬಲ ಸೋಮಣ್ಣ ತಂಡ ಪ್ರಸ್ತುತಪಡಿಸಿದ ಶಿವನ ಹರಿಕಥೆ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆರ್.ಇಂದನ್ ಬಾಬು, ಎನ್.ಟಿ.ಗಿರೀಶ್, ಪುಟ್ಟನಿಂಗಶೆಟ್ಟಿ, ಮಂಜುಳಾ ಮಧು, ಶಶಿರೇಖಾ, ಶ್ರೀಧರ್, ಇಒ ಶಿವಕುಮಾರಯ್ಯ ಮತ್ತಿತರರು ಹಾಜರಿದ್ದರು.

ಹರಿದು ಬಂದ ಭಕ್ತಸಾಗರ: ಶಿವ ಸ್ಮರಣೆಗಾಗಿ ರಾತ್ರಿಯಾಗುತ್ತಿದ್ದಂತೆ ನಿರೀಕ್ಷೆಗೂ ಮೀರಿದ ಭಕ್ತರು ದೇವಾಲಯದತ್ತ ಆಗಮಿಸತೊಡಗಿದರು. ಒಂದೆಡೆ ರಾತ್ರಿಯಿಡಿ ಭಕ್ತರು ಸರತಿಯಲ್ಲಿ ನಿಂತು ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆದರೆ, ಮತ್ತೊಂದೆಡೆ ದರ್ಶನಕ್ಕೆ ಅವಕಾಶ ಸಿಗದೆ ದೇವಸ್ಥಾನ ಮುಂಭಾಗದ ಆವರಣ, ಕೈಸಾಲೆ, ಸಮುಚ್ಚಯಗಳಲ್ಲಿ ಬೀಡುಬಿಟ್ಟು ಶಿವಧ್ಯಾನದಲ್ಲಿ ನಿರತರಾದರು. ಭಕ್ತರನ್ನು ನಿಯಂತ್ರಿಸಲು ಸಿಬ್ಬಂದಿ ಹೆಣಗಾಡಿದರು.

ತಡರಾತ್ರಿ 2 ಗಂಟೆ ಹೊತ್ತಿನಲ್ಲಿ ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ರಥೋತ್ಸವ ದೇವಾಲಯ ಸುತ್ತ ಸಂಚರಿಸಿತು. ಭಕ್ತರು ರಥೋತ್ಸವದಲ್ಲಿ ಹೆಜ್ಜೆ ಹಾಕಿದರು. ನಗರದ ಉದ್ಯಮಿ ಎನ್.ವಿ.ತಿಮ್ಮೇಗೌಡ ಮತ್ತು ಮಕ್ಕಳು, ಸುನಿಲ್, ನಿತಿನ್ ಆರ್ಯ ನೆರವಿನಿಂದ ಕೆ.ಪ್ರಸಾದ್ ಹಾಗೂ ಸುನಿಲ್ ಕುಮಾರ್ ತಂಡದಿಂದ ದೇವಾಲಯದ ಒಳಾವರಣ ಹಾಗೂ ಹೊರಾವರಣದಲ್ಲಿ ಕಣ್ಮನ ಸೆಳೆಯುವ ಪುಷ್ಪಾಲಂಕಾರ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net