

ನಂಜನಗೂಡು: ಪಟ್ಟಣದಲ್ಲಿ ಪ್ರಗತಿಯಲ್ಲಿರುವ ಬಟಾನಿಕಲ್ ಗಾರ್ಡನ್ ನಿರ್ಮಾಣ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಮೂರನೇ ಹಂತದಲ್ಲಿ 10 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಗುರುವಾರ 1.85 ಕೋಟಿ ರೂ. ವೆಚ್ಚದಲ್ಲಿ ಬಟಾನಿಕಲ್ ಗಾರ್ಡನ್ ಮುಂದುವರಿದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಊಟಿ ಬಟಾನಿಕಲ್ ಗಾರ್ಡನ್ ಮಾದರಿಯಲ್ಲಿ ನಂಜನಗೂಡಿನ ಕಪಿಲ ನದಿ ದಡದ 19.23 ಎಕರೆ ಪ್ರದೇಶದಲ್ಲಿ ಸಸ್ಯಕಾಶಿ ಉದ್ಯಾನ ನಿರ್ಮಿಸಬೇಕೆಂಬುದು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಕನಸಾಗಿದೆ. ಅವರು ಕಂದಾಯ ಸಚಿವರಾಗಿದ್ದಾಗ 24 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿತ್ತು. ಮೊದಲ ಹಂತದಲ್ಲಿ 3 ಕೋಟಿ ರೂ. ಬಿಡುಗಡೆಗೊಂಡಿತ್ತು. ಒಂದು ಕೋಟಿ ರೂ. ಅನ್ನು ಅಲಂಕಾರಿಕ ಗಿಡಗಳ ನಿರ್ವಹಣೆ ಹಾಗೂ ಭೂಮಿ ಸಮತಟ್ಟು ಮಾಡಿ ಪ್ರಾಥಮಿಕ ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ ಎಂದರು.
ಇದೀಗ 1.85 ಕೋಟಿ ರೂ. ವೆಚ್ಚದಲ್ಲಿ ಸಸ್ಯಕಾಶಿ ಭೂಪ್ರದೇಶ ಸುತ್ತ ಕಾಂಪೌಂಡ್, ವಿದ್ಯುತ್ ಸಂಪರ್ಕ, ಫುಟ್‌ಪಾತ್ ನಿರ್ಮಿಸಲಾಗುವುದು. ಮ್ಯೂಸಿಯಂ, ಗ್ಲಾಸ್‌ಹೌಸ್ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಮೂರನೇ ಹಂತದಲ್ಲಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಬಳಿ ಮನವಿ ಮಾಡಲಾಗಿದೆ ಎಂದರು.
50 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ
ಕಪಿಲ ನದಿಯಲ್ಲಿ ಪ್ರವಾಹ ಸಂದರ್ಭದಲ್ಲಿ ಅವಘಡ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಥಳ ಪರಿಶೀಲಿಸಿದ್ದಾರೆ. ಈ ಸಂಬಂಧ ನೀರಾವರಿ ಇಲಾಖೆಯಿಂದ 50 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ನೀಲಿನಕ್ಷೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಯೋಜನೆ ಅಂತಿಮಗೊಳ್ಳುತ್ತಿದ್ದಂತೆ ಅನುದಾನ ಮಂಜೂರು ಮಾಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಬಟಾನಿಕಲ್ ಗಾರ್ಡನ್ ಸುರಕ್ಷತೆಯ ದೃಷ್ಟಿಯಿಂದ ತಡೆಗೋಡೆ ನಿರ್ಮಿಸುವುದು ಸೂಕ್ತವಾಗಿದೆ ಎಂದರು.
100 ಆಶ್ರಮ ಮನೆ
ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 100 ಆಶ್ರಯ ಮನೆಗಳ ನಿರ್ಮಾಣಕ್ಕೆ ಶಾಸಕ ಬಿ.ಹರ್ಷವರ್ಧನ್ ಶಿಲಾನ್ಯಾಸ ನೆರವೇರಿಸಿದರು. ಪ್ರತಿ ಮನೆಗಳಿಗೆ ಸರ್ಕಾರ 4.5 ಲಕ್ಷ ರೂ. ಅನುದಾನ ನೀಡುತ್ತಿದೆ. ಎಸ್ಸಿ, ಎಸ್ಟಿ ಫಲಾನುಭವಿಗಳಿಂದ 65 ಸಾವಿರ ರೂ., ಇತರೆ ವರ್ಗದವರಿಂದ 1.2 ಲಕ್ಷ ರೂ. ಪಡೆದು ಮಾಡಿ ಆಶ್ರಯ ಮನೆ ಹಂಚಿಕೆ ಮಾಡಲಾಗುವುದು ಎಂದರು.
ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಆರ್.ಗೋವಿಂದರಾಜನ್, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ರಾಜ್ಯ ಸಮಿತಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ, ತಾಲೂಕು ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಬಾಲಚಂದ್ರು, ನಗರಸಭಾ ಸದಸ್ಯರಾದ ಮೀನಾಕ್ಷಿ ನಾಗರಾಜು, ಮಹದೇವಸ್ವಾಮಿ, ಮಹದೇವಪ್ರಸಾದ್, ಮಹದೇವಮ್ಮ ಸೇರಿದಂತೆ ಮತ್ತಿತರರಿದ್ದರು.