

ನಂಜನಗೂಡು: ಕರೊನಾ ನಿರ್ಮೂಲನೆ ಮಾಡಲು ರೆಮ್ಡೆಸಿರ್ವಿ ಔಷಧವನ್ನು ಉತ್ಪಾದನೆ ಮಾಡುವ ಹಕ್ಕನ್ನು ಜುಬಿಲೆಂಟ್ ಕಂಪನಿ ಪಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ, ಸಂಸದ ಹಾಗೂ ಜಿಲ್ಲಾಧಿಕಾರಿಗಳ ಸಲಹೆ ಸೂಚನೆಯೊಂದಿಗೆ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಮತ್ತೆ ಆರಂಭಿಸುವಂತೆ ಮಾಲೀಕರಿಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದ ಗಿಲೀಡ್ ಸೈನ್ಸಸ್ ಸಂಸ್ಥೆಯು ಕರೊನಾ ನಿವಾರಣೆಗೆ ರೆಮ್ಡೆಸಿರ್ವಿ ಎಂಬ ಔಷಧವನ್ನು ಕಂಡು ಹಿಡಿದಿದ್ದು, ಭಾರತ ಸೇರಿದಂತೆ 127 ದೇಶಗಳಲ್ಲಿ ರೆಮ್ಡೆಸಿರ್ವಿ ಔಷಧವನ್ನು ಉತ್ಪಾದನೆ ಮಾಡುವ ಹಕ್ಕನ್ನು ಜುಬಿಲೆಂಟ್ ಕಂಪನಿ ಪಡೆದಿದೆ.
ನಂಜನಗೂಡಿನಲ್ಲಿ ಕರೊನಾ ಸೋಂಕು ವ್ಯಾಪಿಸಿದ್ದು ಇದೇ ಕಾರ್ಖಾನೆ ಮೂಲಕ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇದರಿಂದ ನಂಜನಗೂಡಿನ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಾರ್ಖಾನೆ ಆರಂಭವಾದರೆ ಮತ್ತೆ ಅದೇ ಸಮಸ್ಯೆ ಮರುಕಳಿಸಬಾರದು ಎಂಬುದು ಶಾಸಕ ಬಿ.ಹರ್ಷವರ್ಧನ್ ಕಳಕಳಿಯಾಗಿದೆ. ಇದನ್ನು ಅರ್ಥಮಾಡಿಕೊಂಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶಾಸಕರು ಹಾಗೂ ಸಂಸದರು ನೀಡುವ ನೀಡುವ ಸಲಹೆ ಸೂಚನೆಗಳನ್ನು ಪರಿಗಣಿಸಿ ಕಾರ್ಖಾನೆ ಆರಂಭಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಸಮ್ಮತಿಸಿರುವ ಕಾರ್ಖಾನೆಯ ಆಡಳಿತ ಮಂಡಳಿ ಶಾಸಕರ ಕೋರಿಕೆಯಂತೆ 50 ಸಾವಿರ ದಿನಸಿ ಕಿಟ್ ಹಾಗೂ 10 ಗ್ರಾಮಗಳ ದತ್ತು ಸ್ವೀಕಾರ ಮಾಡಲು ಮಾತುಕತೆ ಆಗಿದೆ ಎಂದರು.
ಜಿಲ್ಲೆಯಲ್ಲಿ ಕರೊನಾ ಸೋಂಕು ಶೂನ್ಯಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ನೆರೆ ಜಿಲ್ಲೆಯಾಗಿರುವ ಚಾಮರಾಜನಗರ ಹಾಗೂ ಮೈಸೂರು ನಡುವೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಮನವಿ ಕೇಳಿಬರುತ್ತಿವೆ. ಈ ಸಂಬಂಧ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನು ಜುಬಿಲೆಂಟ್ ಕಾರ್ಖಾನೆಯಲ್ಲಿ ಸೋಂಕು ಹರಡಲು ಖಚಿತವಾದ ಕಾರಣ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳಲು ಆಗುತ್ತಿಲ್ಲ. ಕೆಲವು ನೌಕರರು ದೆಹಲಿಗೆ ಹೋಗಿದ್ದರು. ವಿದೇಶದಿಂದ ಆಡಿಟರ್ಸ್ ಆಗಮಿಸಿದ್ದರು. ಅಲ್ಲದೆ ಈ ಕಾರ್ಖಾನೆಗೆ ಕೆಲವರು ವಿದೇಶದಿಂದ ವ್ಯವಹಾರಿಕವಾಗಿ ಬಂದಿದ್ದರು. ಇವುಗಳಲ್ಲಿ ಯಾವ ಮೂಲದಿಂದ ಹರಡಿದೆ ಎಂಬುದರ ಬಗ್ಗೆ ಗೊಂದಲವಿದೆ ಎಂದರು.
ದೇವಾಲಯದಲ್ಲಿ ವಿಶೇಷ ಪೂಜೆ: ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಶ್ವೇತವಸ್ತ್ರಧಾರಿಯಾಗಿ ಆಗಮಿಸಿದ ಸಚಿವ ಎಸ್.ಟಿ.ಸೋಮಶೇಖರ್ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲ ಗುಡಿಗಳಲ್ಲೂ ಪ್ರದಕ್ಷಿಣೆ ಹಾಕಿದ ಸಚಿವರು ದೇವಾಲಯದ ಹೊರಬಂದು ಈಡುಗಾಯಿ ಹಾಕಿದರು. ಕರೊನಾ ಉಲ್ಬಣವಾಗಿದ್ದ ಸಂದರ್ಭದಲ್ಲಿ ನಿಯಂತ್ರಣಗೊಳಿಸುವಂತೆ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಬೇಡಿಕೊಂಡಿದ್ದೆ. ಈಗ ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಹಾಗೆಯೇ ಇಡೀ ರಾಜ್ಯ ಹಾಗೂ ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬರುವಂತೆ ಕಾಪಾಡು ಎಂದು ಪ್ರಾರ್ಥಿಸಿದ್ದೇನೆ ಎಂದರು.
ಶಾಸಕ ಬಿ.ಹರ್ಷವರ್ಧನ್, ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ್, ಅಶೋಕ್, ಎನ್.ಆರ್.ಕೃಷ್ಣಪ್ಪಗೌಡ, ಎನ್.ವಿ.ವಿನಯಕುಮಾರ್, ಎನ್.ಸಿ.ಬಸವಣ್ಣ ಇತರರಿದ್ದರು.