

ಹೈದರಾಬಾದ್: ಖ್ಯಾತ ನಿರ್ದೇಶಕ ವಿವೇಕ್ ಆತ್ರೇಯ ನಿರ್ದೇಶನದ ಹಾಗೂ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಸರಿಪೋದ ಶನಿವಾರಂ' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿಟ್ ಆಯಿತು. ಒಟಿಟಿಯಲ್ಲೂ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪ್ರಿಯಾಂಕಾ ಅರುಳ್ ಮೋಹನ್ ( Priyanka Mohan ) ಒಳ್ಳೆಯ ಹೆಸರು ಪಡೆದಿದ್ದಾರೆ.
ಸದ್ಯ ತೆಲುಗು ಹಾಗೂ ತಮಿಳು ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಪ್ರಿಯಾಂಕಾ ಮೋಹನ್ ‘ಸರಿಪೊದಾ ಶನಿವಾರಂ’ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಇತ್ತೀಚಿಗಷ್ಟೇ ಪ್ರಿಯಾಂಕಾ ಮೋಹನ್ ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ಪ್ರಿಯಾಂಕಾ ಅವರಿಗೆ ಏನಾಯಿತು? ಅಪಘಾತದಿಂದ ಹೇಗೆ ಪಾರಾದರು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ತೋರೂರ್ ಪಟ್ಟಣ ಕೇಂದ್ರದಲ್ಲಿ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಿಯಾಂಕಾ ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಿಯಾಂಕಾ ವೇದಿಕೆ ಮೇಲೆ ಹೋಗಿ ಅಭಿಮಾನಿಗಳಿಗೆ ಶುಭಾಶಯ ಕೋರುವಾಗ ವೇದಿಕೆ ಒಮ್ಮೆಲೇ ಕುಸಿದುಬಿತ್ತು. ಇದರಿಂದ ವೇದಿಕೆ ಮೇಲಿದ್ದವರೆಲ್ಲ ಒಬ್ಬರ ಮೇಲೊಬ್ಬರು ಬಿದ್ದು ಗಾಯಗೊಂಡರು.
ಶಾಪಿಂಗ್ ಮಾಲ್ ಎದುರು ಹಾಕಲಾಗಿದ್ದ ವೇದಿಕೆಯಲ್ಲಿ ಪ್ರಿಯಾಂಕಾ ಭಾಷಣ ಮಾಡುತ್ತಿದ್ದಾಗ ಹಲವರು ವೇದಿಕೆ ಹತ್ತಿದರು. ಇದರಿಂದ ವೇದಿಕೆ ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಅಪಘಾತವಾದ ತಕ್ಷಣ ಸಂಘಟಕರು ಪ್ರಿಯಾಂಕಾ ಅವರನ್ನು ಶಾಪಿಂಗ್ ಮಾಲ್ ಒಳಗೆ ಕರೆದೊಯ್ದರು. ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಮೋಹನ್ ಸುರಕ್ಷಿತವಾಗಿ ಅಪಘಾತದಿಂದ ಪಾರಾಗುತ್ತಿದ್ದಂತೆ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್)