

ಕೋಲಾರ: ನಂಗಲಿ ಮಾದರಿ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮವಹಿಸಿ, 8ನೇ ತರಗತಿ ಮಕ್ಕಳು ಶಿಕ್ಷಣದಿಂದ ವಂಚನೆಗೆ ಒಳಗಾಗದಂತೆ ಎಚ್ಚರವಹಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ತಾಲೂಕಿನ ಆಂಧ್ರ ಗಡಿಯಲ್ಲಿರುವ ನಂಗಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರವಾಗಿ ವೈಯಕ್ತಿಕವಾಗಿ ಮಾತನಾಡಲಾಗಿದೆ, ಮತ್ತೊಮ್ಮೆ ಆಯುಕ್ತರೊಂದಿಗೆ 2 ದಿನದಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಶಾಸಕ ಮಂಜುನಾಥ್ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ 9ನೇ ತರಗತಿ ಪ್ರಾರಂಭಿಸಲು ಅನುಮತಿ ನೀಡಲು ಕ್ರಮವಹಿಸಲಾಗುವುದು, ಆ ಮೂಲಕ ಗಡಿ ಭಾಗದಲ್ಲಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಉತ್ತರಿಸಿದರು.
ಸಮೃದ್ಧಿ ಮಂಜುನಾಥ್ ಮಾತನಾಡಿ, ನಂಗಲಿ ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ 320 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆಯಿದ್ದು, ಸರ್ಕಾರ ಕೂಡಲೇ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ನಂಗಲಿಯಿಂದ 1 ಕಿಮಿ ದೂರ ಹೋದರೆ ಆಂಧ್ರ ಗಡಿ ಇದೆ. ದುರಂತ ಎಂದರೆ ಹಿಂದಿನ ಸಿಎಂ ಜಗನ್‌ಮೋಹನ್ ರೆಡ್ಡಿ ಅವರು ಅಮ್ಮವಡಿ ಯೋಜನೆ ತಂದು ಒಂದು ಮಗು ವ್ಯಾಸಂಗಕ್ಕೆ 15 ಸಾವಿರ ರೂ. ನೀಡುತ್ತಿದ್ದರು, ಈಗಿನ ಸಿಎಂ ಚಂದ್ರಬಾಬು ನಾಯ್ಡು ಅವರು ತಲ್ಲಿವಂದನಂ ಯೋಜನೆ ಜಾರಿಗೆ ತಂದು ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ತಲಾ 15 ಸಾವಿರ ರೂ. ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಕನ್ನಡ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲೆಯನ್ನು ಉಳಿಸಿಕೊಳ್ಳಲೇಬೇಕು ಎಂದರು.
ಶಾಲೆ ಮೇಲ್ದರ್ಜೆಗೇರಿಸಲು ಇಲಾಖೆಯ ಎಲ್ಲ ಮಾನದಂಡಗಳು ಈ ಶಾಲೆಗಿವೆೆ. ಸುಸಜ್ಜಿತ ಸೌಲಭ್ಯವಿದೆ. ರೋಟರಿ ಜತೆ ಸೇರಿ ಸಿಎಸ್‌ಆರ್ ಅನುದಾನ ವೆಚ್ಚ ಮಾಡಿ 6.5 ಕೋಟಿ ರೂ. ವೆಚ್ಚದಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 56 ಮಕ್ಕಳು 8ನೇ ತರಗತಿ ಉತ್ತೀರ್ಣರಾಗಿ 9ನೇ ತರಗತಿಗೆ ದಾಖಲಾಗಬೇಕಾಗಿದೆ. ಸರ್ಕಾರ ಕೂಡಲೇ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.