ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗುತ್ತಿದ್ದಾನೆ: ಬದುಕಿದ್ದೂ ಸತ್ತಂತಾಗಿದ್ದೇನೆ- ಏನು ಮಾಡಲಿ?

nandondukathe
Published on
ಪ್ರಶ್ನೆ: ನಾನೊಂದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ್ದೇನೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನತದೃಷ್ಟೆ. ತಂದೆಯ ಸಾವಿಗೆ ನಾನು ಋತುಮತಿಯಾದ ನಕ್ಷತ್ರವೇ ಕಾರಣವೆಂದು ಸಂಬಂಧಿಕರು ಆಡಿಕೊಂಡರು. ಅಲ್ಲಿಂದ ಶುರುವಾದ ಕಷ್ಟಗಳ ಸರಮಾಲೆ ನನ್ನನ್ನು ಸಾಯುವ ಸ್ಥಿತಿಗೆ ತಂದಿಟ್ಟಿದೆ. ಚಿಕ್ಕ ವಯಸ್ಸಿನಲ್ಲಿ ಯಾರ ಜೊತೆ ಮಾತಾಡಿದರೂ ಅವರಿಗೆ ಸಂಬಂಧ ಕಟ್ಟಿ ಆಡಿಕೊಂಡ ಸಂಬಂಧಿಕರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ವಿದ್ಯಾಭ್ಯಾಸ ನನ್ನ ಆಸೆ ಆಕಾಂಕ್ಷೆಗಳ ಮೇಲೂ ಒತ್ತಡ ಹಾಕಿದರು. ಇಷ್ಟವಿಲ್ಲದ ಹುಡುಗನ ಜೊತೆ ಮದುವೆ ಮಾಡೋ ಪ್ರಯತ್ನ ನಡೆಸಿದರು. ಆದರೂ ಎಲ್ಲಾದನ್ನು ಸಹಿಸಿಕೊಂಡೆ. ಇದಕ್ಕಿದ್ದಂತೆ 17ನೇ ವಯಸ್ಸಲ್ಲಿ ಶ್ರವಣದೋಷ ಸಮಸ್ಯೆ ಶುರುವಾಯ್ತು. ಹಲವು ವೈದ್ಯರನ್ನು ಸಂಪರ್ಕಿಸಿದರೂ ನನ್ನ ಸಮಸ್ಯೆಗೆ ಪರಹಾರ ಸಿಗಲಿಲ್ಲ. ಆದರೂ ಡಿಗ್ರಿಯಲ್ಲಿ ಶೇ. 67 ನೊಂದಿಗೆ ಪಾಸಾದೆ.

ಸರಿಯಾಗಿ ಕಿವಿ ಕೇಳಿಸುವುದಿಲ್ಲ ಎಂಬ ಕಾರಣಕ್ಕೆ ನಮ್ಮ ಸಂಬಧಿಕರು, ನನ್ನನ್ನು ಮಾನಸಿಕ ಅಸ್ವಸ್ಥನಿಗೆ ಕೊಟ್ಟು ಮದುವೆ ಮಾಡೋ ಸಂಚು ರೂಪಿಸಿದರು. ಎಲ್ಲದನ್ನು ಎದುರಿಸಿ ನನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳೋ ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರತಿದಿನ ವರ್ಕೌಟ್ ಮಾಡುತ್ತಿದ್ದೆ. ನಮ್ಮದೇ ಹತ್ತಿರದ ಸಂಬಂಧಿಕರೊಬ್ಬರ ಮಗ ನನ್ನನ್ನು ಪ್ರೀತಿಸಲಾರಂಭಿಸಿದ. ಅವನು ನನಗಿಂತಲೂ ನಾಲ್ಕು ವರ್ಷ ಚಿಕ್ಕವನು. ಆದ್ರೂ ನನ್ನೆಲ್ಲಾ ಸಮಸ್ಯೆಗಳನ್ನು ತಿಳಿದು ನನ್ನನ್ನು ಮನಸ್ಪೂರ್ತಿಯಾಗಿ ಪ್ರೀತಿಸುತ್ತಿದ್ದಾನೆ ಎಂದು ಒಪ್ಪಿಕೊಂಡೆ. ನಮ್ಮ ಮನೆಯಲ್ಲಿ, ನಮ್ಮ ಪ್ರೀತಿಯ ವಿಷಯ ತಿಳಿದಾಗ ನಮ್ಮ ತಾಯಿ ಒಪ್ಪಿಕೊಳ್ಳಲಿಲ್ಲ. ಪ್ರೀತಿಸಿದ ಹುಡುಗನನ್ನು ಬಿಡಲಾಗದೆ ಚಿಂತೆ ಮಾಡಿ ಮಾನಸಿಕವಾಗಿ ಕುಗ್ಗಿದ್ದೆ ಇದರಿಂದ ಮೂರೇ ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡು ನಡೆಯಲು ಬಾರದೆ ಅವಸ್ಥೆ ಪಟ್ಟು ಕೊನೆಗೆ ನನ್ನ ಗರ್ಭಕೋಶವು ಹಾಳಾಯ್ತು. ಆದರೂ ಸರ್ಕಾರಿ ಕೆಲಸ ಸಿಕ್ಕ ತಕ್ಷಣ ಯಾರಿಗೂ ತಿಳಿಯದಂತೆ ಮದುವೆಯಾಗೋಣ ಎಂದು ತನ್ನ ತಾಯಿಯ ಮೇಲೆ ಆಣೆ ಮಾಡಿದ. ಕೆಲಸ ಸಿಗುವುದಕ್ಕೂ ಮುಂಚೆ ನನ್ನನ್ನು ದೈಹಿಕವಾಗಿ ಬಳಸಿಕೊಂಡ.

ಕೆಲಸ ಸಿಕ್ಕ ಮೇಲೆ ಪೋಷಕರನ್ನು ಒಪ್ಪಿಸಿಯೇ ಮದುವೆ ಆಗೋಣವೆಂದು ಹಠಕ್ಕೆ ಬಿದ್ದ. ಆದರೂ ಪೋಷಕರನ್ನು ಒಪ್ಪಿಸುತ್ತಾನೆ ಎನ್ನುವ ನಂಬಿಕೆಯಿಂದ ಒಂದು ವರ್ಷ ಕಾದೆ. ಕೊನೆಗೆ ತನ್ನನ್ನು ಮದುವೆಯಾಗಬೇಕೆಂದರೆ ಹತ್ತು ಲಕ್ಷ ವರದಕ್ಷಿಣೆ ಬೇಕು ಎಂದ. ಕೋಪದಲ್ಲಿ ಅವರ ತಂದೆಗೆ ಆ ವಿಷಯ ತಿಳಿಸಿದೆ. ಆದ್ರೆ ಅವರಪ್ಪ ನಮ್ಮಿಬ್ಬರನ್ನು ದೂರ ಮಾಡಲು ಅವನಿಗೆ ಬೇರೆ ಕಡೆ ಹುಡುಗಿಯನ್ನು ನೋಡಲು ಆರಂಭಿಸಿದರು. ನನ್ನ ಬಳಿ ಕೆಲವು ಮೆಸೇಜ್ ಗಳು ಮತ್ತು ಫೋಟೋ ಗಳು ಮಾತ್ರ ಇದ್ದಾವೆ. ಪೊಲೀಸ್ ಠಾಣೆ ಗೆ ಹೋದರು ನಾವು ಒಪ್ಪೋದಿಲ್ಲ ಎಂದು ಅವನ ಪೋಷಕರು ಹಠಕ್ಕೆ ಬಿದ್ದರು. ಅಷ್ಟೇ ಅಲ್ಲದೇ ನನ್ನ ಶೀಲ ಶಂಕಿಸಿ ಅನ್ನಬಾರದ ಮಾತುಗಳನ್ನೆಲ್ಲಾ ಅಂದು ಸಂಬಂಧಿಕರ ಮುಂದೆ ಮರ್ಯಾದೆ ತೆಗೆದರು. ಇದರಿಂದ ಏನು ಮಾಡಲಾಗದೆ ಅವನಿಗೆ ಪರಿಪರಿಯಾಗಿ ಬೇಡಿಕೊಂಡೆ. ಕೊನೆಗೆ ನನ್ನ ಕಿಡ್ನಿ ಮಾರಿ ಹಣ ತರುವ ಯೋಚನೆ ಮಾಡಿ 20 ಲಕ್ಷ ತರುವೆ ನನಗೆ ಮೋಸ ಮಾಡಬೇಡ ಎಂದು ಕೇಳಿಕೊಂಡೆ. ಅವನ ಬಂಡ ಮನಸ್ಸು ಬದಲಾಗಲಿಲ್ಲ. ಮಹಿಳಾ ಸಮಾಜದವರ ಸಹಾಯ ಬೇಡಿದೆ ಅವರನ್ನು ರೌಡಿಗಳು ಎಂದು ಆರೋಪ ಮಾಡಿ ಪೊಲೀಸ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ.

ನಮ್ಮ ಮತ್ತು ಅವರ ಕುಟುಂಬದ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿತ್ತು. ಆದ್ರೆ ಅವನ ತಂದೆ ನನ್ನ ಜೊತೆ ತುಂಬಾ ಅಪ್ಯಾಯತೆಯಿಂದಿದ್ದರು. ನಮ್ಮ ಪ್ರೀತಿ ವಿಷಯ ತಿಳಿದ ಮೇಲೆ ಪೂರ್ತಿಯಾಗಿ ಬದಲಾದರು. ಈಗ ಸಂಬಂಧಿಕರ ಮುಂದೆ ನನ್ನ ಇಡೀ ಕುಟುಂಬ ತಲೆ ತಗ್ಗಿಸುವಂತಾಗಿದೆ. ಅವನು ಪ್ರೀತಿ ಮಾಡಿ ಮೋಸ ಮಾಡಿ ನನಗೆ ಇಂತಹ ಪಟ್ಟ ಕಟ್ಟಿ ಈಗ ಬೆರೆಯವಳನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಸರಿಯಾಗಿ 6ತಿಂಗಳು ತುಂಬಾ ಜನರಲ್ಲಿ ಸಹಾಯ ಬೇಡಿದೆ. ಯಾರೊಬ್ಬರಿಂದಲೂ ನನಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ. ನಮ್ಮಿಬ್ಬರನ್ನು ದೂರ ಮಾಡಿ ಈಗ ಸರಿಯಾಗಿ ಹತ್ತು ತಿಂಗಳು ಕಳೆದಿವೆ. ಲಾಕ್ ಡೌನ್ ನಿಂದ ನಾಲ್ಕು ತಿಂಗಳಿನಿಂದ ಏನು ಮಾಡಲಾಗದೆ ಒಬ್ಬಳೇ ಕಣ್ಣೀರಿಡುತ್ತ ನಾಲ್ಕು ಗೋಡೆಗಳ ಮಧ್ಯೆ ನರಳಾಡುತ್ತಿದ್ದೇನೆ. ಬದುಕಿನ ಮೇಲೆ ಜಿಬುಪ್ಸೆ ಹುಟ್ಟಿದೆ. ನಡತೆಗೆಟ್ಟವಳು ಅನ್ನೋ ಪಟ್ಟ ಕೊಟ್ಟು ಅವನು ಬೇರೆಯವಳನ್ನ ಮದುವೆಯಾಗಲು ಸಿದ್ಧನಾಗಿದ್ದಾನೆ. ಅವನನ್ನು ಮರೆತು ಬದುಕು ಅನ್ನೋ ಉತ್ತರ ನಿಮ್ಮಿಂದಲೂ ಬರುವುದಿಲ್ಲ ಎಂದುಕೊಂಡಿದ್ದೇನೆ. ನಾನು ಮಾನಸಿಕವಾಗಿ ತುಂಬಾ ನೋಡಿದ್ದೇನೆ. ಪ್ರತಿಕ್ಷಣ ಸಾಯುವ ಯೋಚನೆ ಬರುತ್ತಿದೆ. ಸತ್ತ ಹೆಣದಂತೆ ಬದುಕುತ್ತಿದ್ದೇನೆ. ನನಗೆ ಮೋಸ ಮಾಡಿರುವ ಪಾಪಿಗೆ ನಮ್ಮ ಕಾನೂನಿನಲ್ಲಿ ಯಾವ ರೀತಿ ಶಿಕ್ಷೆ ಇದೆ. ತಿಳಿಸಿ

ಉತ್ತರ: ನಿಮ್ಮನ್ನು ಮೊದಲು ಅಭಿನಂದಿಸುತ್ತೇನೆ. ಅದೂ ಎರಡು ಕಾರಣಕ್ಕೆ. ಒಂದು - ಶ್ರವಣದ ದೋಷವನ್ನು ಬದಿಗಿಟ್ಟು ಪದವಿಯಲ್ಲಿ ೬೭% ಅಂಕ ಪಡೆದು ಪಾಸಾದಿದ್ದಕ್ಕೆ. ಎರಡು - ಮಾನಸಿಕ ಅಸ್ವಸ್ಥನನ್ನು ಮದುವೆಯಾಗದೇ, ನೀವೇ ವರ್ಕ್ ಔಟ್ ಮಾಡಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಂಡಿದ್ದಕ್ಕೆ. ಆದರೆ ಮುಂದಿನ ನಿಮ್ಮ ಬದುಕಿನಲ್ಲಿ ನಿಮಗಿದ್ದ ಗಟ್ಟಿತನ ಮತ್ತು ಜಾಣತನಗಳು ಯಾಕೆ ಮರೆಯಾಗಿಹೋದವು? ಇದು ಅನೇಕ ಹುಡುಗಿಯರ ದೌರ್ಬಲ್ಯ. ಓದುವಾಗ ಎಲ್ಲಾ ಸಂಕಷ್ಟಗಳನ್ನೂ ಎದುರಿಸಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವುದು. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪರೀಕ್ಷೆಯಲ್ಲಿ ಸೋತು ಶರಣಾಗಿ ದುಃಖದುಮ್ಮಾನಗಳಿಗೆ ಒಳಗಾಗಿ ಸಾಯುವ ಹಂತಕ್ಕೆ ಬರುವುದು. ನನಗೆ ಇಂಥಾ ಹುಡುಗಿಯರನ್ನು ಕಂಡರೆ ತುಂಬಾ ನೋವಾಗುತ್ತದೆ. ಗಟ್ಟಿತನ ಮತ್ತು ಜಾಣತನಗಳನ್ನು ಬಲವಾಗಿ ಉಳಿಸಿ ಬೆಳೆಸಿಕೊಂಡರೆ ಮಾತ್ರ ಬದುಕಲು ಬೇಕಾದ ’ ಜೀವನ ಕೌಶಲ್ಯ ’ ನಮ್ಮದಾಗುತ್ತದೆ. ಪ್ರೀತಿ ಪ್ರೇಮ ಎಂದಕೂಡಲೇ ಶರಣಾಗತರಾಗಿ ಬಿಡುವುದು, ಬುದ್ಧಿಯನ್ನು ಒತ್ತೆಯಿಟ್ಟುಬಿಡುವುದು, ಸಂಕಷ್ಟಗಳಿಗೆ ಸಿಲುಕಿ, ಶೋಷಣೆಗೆ ಒಳಗಾಗುವುದು. ಇದು ಪೆದುತನವಷ್ಟೇ ಅಲ್ಲ, ಅಪರಾಧಿತನಕ್ಕೆ ಇಂಬುಕೊಡುವ ಹೊಣೆಗೇಡಿತನವೂ ಆಗುತ್ತದೆ. ಈಗ ನಿಮ್ಮ ವಿಷಯವನ್ನೇ ತೆಗೆದುಕೊಳ್ಳಿ.

1. ಆತ ಪುಸಲಾಯಿಸಿದನೆಂದು ನೀವು ಅವನೊಂದಿಗೆ ದೇಹಸುಖ ಪಡೆದಿರಿ. ಇದು ಇಬ್ಬರೂ ಪಡೆದ ಸುಖವೇ. ಆದರೆ ಶೀಲದ ಸಮಸ್ಯೆ ನಿಮಗೊಬ್ಬರಿಗೆ ಮಾತ್ರ, ಅವನಿಗಿಲ್ಲ. ಅದನ್ನು ನೀವೂ ಮೈಮೇಲೆ ಹಾಕಿಕೊಂಡು ಪರಿತಾಪವನ್ನು ಅನುಭವಿಸುತ್ತಿದ್ದೀರಿ. ಒಮ್ಮೆಯಾದರೂ, ಹಿಂದೆ ಮನೋರೋಗಿಯನ್ನು ತಿರಸ್ಕರಿಸಿದಾಗ ತೋರಿದ ದಾಷ್ಟ್ಯವನ್ನು ತೋರಿಸಿ " ಅಲ್ಲಯ್ಯಾ ನಾನು ಶೀಲಗೆಟ್ಟವಳಾದರೆ ನೀನೂ ಶೀಲಗೆಟ್ಟಿಲ್ಲವೇ"? ಎಂದು ಅವನ ಶರಟಿನ ಕುತ್ತಿಗೆ ಪಟ್ಟಿಯನ್ನು ಹಿಡಿದು ಕೇಳಲಿಲ್ಲ.

2. ಅವನು ವರದಕ್ಷಿಣೆ ಕೇಳಿದ, ನೀವು ನಿಮ್ಮ ಕಿಡ್ನಿ ಮಾರಿಯಾದರೂ ೨೦ ಲಕ್ಷ ಕೊಡುವೆನೆಂದಿರಿ. 67 % ಪಡೆದು ಓದಿದ ನಿಮ್ಮ ಡಿಗ್ರಿಶಿಕ್ಷಣದಲ್ಲಿ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧವೆಂದು ಕಲಿಸಲಿಲ್ಲವೇ? ಮೊದಲೇ ಸಾಕಷ್ಟು ರೋಗಗಳಿಂದ ಬಳಲಿ ಬೆಂಡಾಗಿರುವ ನೀವು ನಿಮ್ಮ ಕಿಡ್ನಿಯನ್ನು ಮಾರಿಯಾದರೂ ಅವನಿಗೆ ವರದಕ್ಷಿಣೆ ಕೊಟ್ಟು ಮದುವೆಯಾಗಲು ಅವನು ಯಾವ ಊರಿನ ರಾಜಕುಮಾರ? ಆಯಿತು ನೀವು ಕಿಡ್ನಿ ಮಾರಿ ಅವನಿಗೆ ಹಣಕೊಟ್ಟು ಮದುವೆಯನ್ನೇ ಆದಿರಿ ಎಂದಿಟ್ಟುಕೊಳ್ಳೋಣ, ಮುಂದಿನ ನಿಮ್ಮ ಬದುಕು ಆರೋಗ್ಯವಾಗಿರುತ್ತದೆ ಎನ್ನುವುದಕ್ಕೆ ಯಾವ ಆಧಾರವಿದೆ? ಮೊದಲೇ ನಿಮ್ಮ ಗರ್ಭಕೋಶ ಹಾಳಾಗಿದೆಯೆಂದು ಬರೆದಿದ್ದೀರಿ.

ಈಗ ನಿಮ್ಮ ಉಳಿದ ಅಂಗಗಳನ್ನಾದರೂ ಬದುಕಿರುವವರೆಗೆ ಆರೋಗ್ಯವಾಗಿಟ್ಟುಕೊಳ್ಳಬೇಕಲ್ಲವೇ? ಪ್ರೀತಿ ಪ್ರೇಮದ ಭ್ರಮೆಯಲ್ಲಿ ನೆರಳದೇ, ಒಮ್ಮೆ ನಿಧಾನವಾಗಿ ಯೋಚನೆ ಮಾಡಿ. ನಿಮ್ಮನ್ನು ಹೆದರಿಸುತ್ತಾ ಬೆದರಿಸುತ್ತಾ ನಿಮಗೆ ಸಹಾಯಮಾಡುವವರನ್ನೇ ರೌಡಿಯೆಂದು ಕರೆಯುತ್ತಾ ಮೆರೆಯುತ್ತಿರುವ ಅವನು ರೌಡಿಯಲ್ಲವೇ? ಕಾಡಿಬೇಡಿಯಾದರೂ ಅವನನ್ನು ಮದುವೆಯಾದರೆ ಮುಂದಿನ ನಿಮ್ಮ ಜೀವನ ಎಷ್ಟು ಸುಖವಾಗಿರುತ್ತದೆಯೆಂದು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ?

3. ’ ಅವನನ್ನು ಮರೆತು ಬದುಕು ಅನ್ನೋ ಉತ್ತರ ನಿಮ್ಮಿಂದಲೂ ಬರುವುದಿಲ್ಲ ಎಂದುಕೊಂಡಿದ್ದೇನೆ ’ ಅಂತ ಬರೆದಿದ್ದೀರಲ್ಲ? ಈ ನಿಮ್ಮ ಜಾಣತನಕ್ಕೆ ಏನೆನ್ನಲಿ? ನಮ್ಮ ಬದುಕೇನು ಸಿನಿಮಾ ಕೆಟ್ಟುಹೋಯಿತೇ? " ಪ್ರೇಮಾ ಪ್ರೀತಿ ಅಮರ! ಒಮ್ಮೆ ಹಾಸಿಗೆ ಹಂಚಿಕೊಂಡಾದ ಮೇಲೆ ನೀನು ಅವನ ಸ್ವತ್ತು " ಎಂದೆಲ್ಲಾ ಬಿಂಬಿಸುವುದು ಅವೈಜ್ಞಾನಿಕವಾಗಿ ಸಿನಿಮಾಗಳಲ್ಲಿ ಮಾತ್ರ. ಅದನ್ನೇ ನಂಬುವ ಮೂರ್ಖ ಸಮಾಜವೂ ನಮ್ಮ ಮುಂದಿದೆ. ಆದರೆ ನಾವು ಮಹಿಳೆಯರು , ವಿದ್ಯಾವಂತೆಯರು, ಮತ್ತು ವೈಜ್ಞಾನಿಕವಾಗಿ ಚಿಂತಿಸುವವರು ಈ ಮೂರ್ಖ ನಂಬಿಕೆಗಳನ್ನು ನಮ್ಮ ಬದುಕಿನಿಂದಾಚೆ ನೂಕಬೇಕು.

ಮದುವೆಯಾದ ಗಂಡನೇ ಹೆಂಡತಿಯ ಮೇಲೆ ಕೈ ಮಾಡಿದರೆ, ಶೋಷಣೆ ಮಾಡಿದರೆ, " ಬಿಟ್ಟು ಬಾರಮ್ಮಾ ಬದುಕಿರುವವರೆಗೂ ಅವನು ಸೃಷ್ಟಿಸಿರುವ ನರಕದಲ್ಲಿ ಕೊಳೆಯಬೇಡ, ಹೊರಗೆ ಬಂದು ನಿನ್ನ ಕಾಲಮೇಲೆ ನೀನು ನಿಂತು, ನೆಮ್ಮದಿಯ ಬದುಕನ್ನು ಪಡೆದುಕೋ " ಎನ್ನುವ ನಾನು " ಅವನನ್ನು ಮರೆತು ಬದುಕಬೇಡಮ್ಮಾ " ಎನ್ನುವ ಸಲಹೆಯನ್ನು ಕೊಡುತ್ತೇನೆಂದು ಹೇಗೆ ಭಾವಿಸಿದಿರಿ? ಅವನನ್ನು ಮರೆಯುವುದು ಮಾತ್ರವಲ್ಲ, ಅವನ ಹೆಸರನ್ನೂ ನಿಮ್ಮ ತಲೆಯಿಂದ ಕಸ ಎಸೆಯುವಂತೆ ಬಿಸಾಡಿ, ಹೊಸ ಬದುಕನ್ನು ಕಟ್ಟಿಕೊಳ್ಳಿ. ಅದುವೇ ಜಾಣತನ ಮತ್ತು ಮೊದಲಿದ್ದ ನಿಮ್ಮ ಗಟ್ಟಿತನಕ್ಕೆ ಸಾಕ್ಷಿ.

ನೀವು ಪುಣ್ಯ ಮಾಡಿದ್ದೀರಿ. ಅವನು ನಿಮ್ಮ ಕುತ್ತಿಗೆಗೆ ತಾಳಿ ಎನ್ನುವ ಮೂರು ಗಂಟನ್ನು ಬಿಗಿದಿಲ್ಲ! ಸೇಫ಼್ ಜ಼ೋನ್ ನಲ್ಲಿದ್ದೀರೆಂದು ಭಾವಿಸಿ. ಮದುವೆಯೂ ಆಗಿ, ಒಂದು ಮಗುವನ್ನೂ ಅವನು ದಯಪಾಲಿಸಿ ಬಿಟ್ಟಿದ್ದಿದ್ದರೆ, ಇಂಥಾಧನ ಪಿಶಾಚಿ ರಾಕ್ಷಸರ ಜೊತೆ ಬದುಕಿಡೀ ಹೆಣಗುವುದು ಎಷ್ಟು ಕಷ್ಟ ಎನ್ನುವ ಪರಿಕಲ್ಪನೆ ನಿಮಗಿಲ್ಲ. ಅವೆಲ್ಲದರಿಂದ ಬಚಾವಾಗಿದ್ದೀರಿ. ಅಭಿನಂದನೆಗಳು. ಸಾಯುವ ಚಿಂತೆ ಬಿಟ್ಟು ಮುಂದಿನ ಬದುಕನ್ನು ಜಾಣತನದಿಂದ ನಿರ್ವಹಿಸಿ. ಒಳಿತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net