

ಕರೊನಾ ಸಂಕಷ್ಟದ ಕಾಲದಲ್ಲಿ ಕುಟುಂಬದಲ್ಲಿ ಅಸಹನೆ ಜಾಸ್ತಿಯಾಗುತ್ತಿದೆ, ಹೆಂಗಸರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಇತ್ಯಾದಿ ವಿಷಯಗಳುಳ್ಳ ಕಾಗದಗಳೂ, ಫೋನ್ ಗಳೂ ಬರುತ್ತಿವೆ. ಈ ಸಂಕಷ್ಟ ಎಲ್ಲರನ್ನೂ ಒಳಗೊಳಗೇ ಅಧೀರರನ್ನಾಗಿಸುತ್ತಿದೆ. ಆರ್ಥಿಕವಾಗಿ ಬಲಿಷ್ಠರಾದವರೂ ಸಹ ಮಾನಸಿಕವಾಗಿ ಕುಸಿಯುತ್ತಿದ್ದಾರೆ. ಇನ್ನು ಮಧ್ಯಮವರ್ಗದ ಕುಟುಂಬಗಳೂ ಅನಿಶ್ಚಯತೆಯಲ್ಲಿ ಮಾನಸಿಕ ಅಸಮತೋಲನವನ್ನೇ ಕಾಣುವಂತಾಗಿವೆ. ಈ ದುಃಸ್ಥಿತಿಯ ಕಾಲದಲ್ಲಿ ನೀವು ಬಡವರಿರಲಿ, ಬಲ್ಲಿದರಿರಲಿ, ನಿಮ್ಮನ್ನು ನೀವು ಅರಿಯದಿದ್ದರೆ ನೆಮ್ಮದಿ ಎನ್ನುವುದು ಮರೀಚಿಕೆಯೇ ಆಗುತ್ತದೆ. ಆದ್ದರಿಂದ ಈ ಬರಹವನ್ನು ನಮ್ಮನ್ನು ನಾವು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವ ವಿಷಯಗಳನ್ನು ತಿಳಿಸಲು ಬಳಸಿಕೊಳ್ಳುತ್ತೇನೆ.
ನಮ್ಮ ತಲೆಯ ಒಳಗೆ ’ಮೆದುಳು ’ ಎನ್ನುವ ಅಂಗವೊಂದಿದೆ. ಅದನ್ನು ’ನಾನು ’ ಎಂದುಕೊಳ್ಳುವ ಈ ಹೊರಬುದ್ಧಿಯಿಂದ ಸಂಪೂರ್ಣವಾಗಿ ನಿಯಂತ್ರಿಸಲಾಗುವುದಿಲ್ಲ. ಒಳಗೆ ನಮಗೇ ತಿಳಿಯದಂತೆ ಬೇಕಾದಷ್ಟು ಸರಿಯಾಗಿಯೂ, ತಪ್ಪುತಪ್ಪಾಗಿಯೂ ಚಿಂತನ ಮಂಥನಗಳು ನಡೆಯುತ್ತಲೇ ಇರುತ್ತವೆ. ಸುಸೂಕ್ಷ್ಮವಾಗಿ ನಮ್ಮ ಹೊರನಡವಳಿಕೆಗಳನ್ನು ನಾವೇ ವಿಶ್ಲೇಷಣೆಗೆ ಒಳಪಡಿಸಿಕೊಂಡರೆ ನಮ್ಮ ಒಳ ಮನಸ್ಸನ್ನೂ ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು. ಇದನ್ನು ನಮ್ಮ ಮಿದುಳು ಆಗಾಗ್ಗೆ ನಮಗೆ ಗೊತ್ತಿಲ್ಲದಂತೆ ಮಾಡುತ್ತದೆ. ಉದಾಹರಣೆಗೆ, ಯಾರಮೇಲೋ ಕೋಪಗೊಂಡು ಕೂಗಾಡಿಬಿಡುತ್ತೇವೆ, ನಂತರ ಸರಿ ತಪ್ಪುಗಳ ವಿವೇಚನೆಯಿರುವವರು “ ಛೇ ನಾನು ಹಾಗೆ ಕೂಗಾಡಬಾರದಿತ್ತು “ ಎಂದುಕೊಳ್ಳುತ್ತಾರೆ. ಅಂಥಾ ವಿವೇಚನೆಯಿಲ್ಲದವರು “ ನಾನು ಹಾಗೆ ಕೂಗಾಡಿದ್ದೇ ಸರಿ “ ಎಂದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಈ ವಿವೇಚನೆಯಿಲ್ಲದವರಿಗೆ ಗೊತ್ತಿಲ್ಲದಿರುವುದು ಏನೆಂದರೆ ತಾವು ಹಾಗೆ ಕೂಗಾಡಿದ್ದರಿಂದ ತಮ್ಮದೇ ಮಿದುಳಿನ ನರಮಂಡಲಗಳಿಗೆ ಘಾಸಿಯಾಗಿದೆ ಎನ್ನುವ ವಿಚಾರ. ಹೀಗೆ ಪದೇಪದೇ ಕೂಗಾಡಿ ಇತರರನ್ನು ಈ ಮಾರ್ಗವಾಗಿ ಹೆದರಿಸಿ ತಮ್ಮ ಕೈಲಿಟ್ಟುಕೊಂಡಿದ್ದೇನೆಂದು ಭ್ರಮಿಸುವವರು ತಮ್ಮ ನರಮಂಡಲಗಳಿಗೆ ಸಾಕಷ್ಟು ಹಾನಿ ಮಾಡಿಕೊಂಡು ಹೃದಯಾಘಾತಕ್ಕೆ, ರಕ್ತದೊತ್ತಡಕ್ಕೆ ಒಳಗಾಗುತ್ತಾರೆ.
ಈಗ ಕರೊನಾ ಸಂಕಷ್ಟದ ಕಾಲದಲ್ಲಿ ಮಿದುಳುಗಳು ಕೆಲಸ ಮಾಡುತ್ತಿರುವ ಪರಿಯನ್ನು ಗಮನಿಸೋಣ. ಯಾವುದೇ ಆಘಾತಕರವಾದ, ಅನಿಶ್ಚಯವಾದ, ಪರಿಹಾರ ನಮ್ಮ ಕೈಲಿಲ್ಲವೆಂದು ತಿಳಿದಿರುವ ಸಮಸ್ಯೆ ಎದುರಾದಾಗ ಮಿದುಳು ನಾಲ್ಕು ಆಯಾಮಗಳಲ್ಲಿ ಕೆಲಸಮಾಡುತ್ತದೆ. ಇದರಲ್ಲಿ ಮೊದಲನೆಯದು, ಎರಡನೆಯದು ಎನ್ನುವ ಸರದಿಯ ಸಾಲಿಲ್ಲ. ಒಬ್ಬೊಬ್ಬರ ಮಿದುಳು ಒಂದೊಂದು ಆಯಾಮಗಳನ್ನು ತಲುಪಬಹುದು. ನಮಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳು 1,2,3,4 ಎಂದು ವಿಂಗಡಿಸಿದ್ದಾರೆ ಅಷ್ಟೆ.
ಆಯಾಮ 1 – ನಿರಾಕರಣೆ – ಕೆಟ್ಟ ಸುದ್ದಿಯನ್ನು ಬುದ್ಧಿ ನಿರಾಕರಿಸುತ್ತದೆ. ’ ಕರೊನಾ ಅನ್ನುವ ಸುದ್ದಿಯೇ ಸುಳ್ಳಿರಬಹುದು. ಇದು ನಮ್ಮ ದೇಶಕ್ಕೆ ಬರುವುದಿಲ್ಲ, ಚೀನಾ, ಅಮೇರಿಕಾ,ಇಟಲಿಯಲ್ಲಿ ಮಾತ್ರವಿದೆ. ಯಾವುದೋ ಒಂದು ಕೋಮಿನವರಿಗೆ ಮಾತ್ರ ಬರುತ್ತದೆ, ನಮಗೆ ಅಲ್ಲ. ಮಾಂಸಾಹಾರಿಗಳಿಗೆ ಮಾತ್ರ ಬರುತ್ತದೆ, ನಾವು ಸಸ್ಯಾಹಾರಿಗಳು ನಮಗೆ ಬರುವುದಿಲ್ಲ. ಮುದುಕರಿಗೆ ಮಕ್ಕಳಿಗೆ ಮಾತ್ರ ಬರುತ್ತದೆ, ನಾವು ಯೌವನದಲ್ಲಿದ್ದೇವೆ ನಮಗೆ ಬರುವುದಿಲ್ಲ ’. ಹೀಗೆ ಪ್ರತಿಯೊಬ್ಬರೂ ತಮ್ಮನ್ನು ಸಮಸ್ಯೆಯಿಂದ ಬೇರ್ಪಡಿಸಿಕೊಂಡು ಸಮಾಧಾನ ಮಾಡಿಕೊಳ್ಳುವುದು ನಿರಾಕರಣ ಆಯಾಮ. ಈ ಸ್ಥಿತಿಯಲ್ಲಿರುವ ಜನ ಸರ್ಕಾರ ಎಷ್ಟೇ ನಿಯಮಗಳನ್ನು ಮಾಡಿದರೂ ಪಾಲಿಸುವುದಿಲ್ಲ. ಮಾಸ್ಕ್ಗಳನ್ನು ಧರಿಸುವುದಿಲ್ಲ. ಪೋಲೀಸರ ಕಣ್ಣು ತಪ್ಪಿಸಿ ಸೀಲ್ಡೌನ್ ಆಗಿರುವ ರಸ್ತೆಯಲ್ಲೂ ನುಗ್ಗಲು ಪ್ರಯತ್ನಿಸುತ್ತಾರೆ. ಮೆರವಣಿಗೆಗಳನ್ನು ಮಾಡುತ್ತಾರೆ. ಆದರೆ ಇವರ ಒಳಮನಸ್ಸೂ ಎದುರಿಗಿರುವ ಸತ್ಯವನ್ನು ಗ್ರಹಿಸಿರುತ್ತದೆ. ಇವರ ಹೊರಮನಸ್ಸು ಅದನ್ನು ಮುಚ್ಚಿಹಾಕಿ, ತಮಗೆ ತಾವೇ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದು ತರ್ಕಹೀನ ನಡವಳಿಕೆ.
ಆಯಾಮ 2 – ವಿವೇಕ ಹೀನ – ಈಗ ಒಳ ಮತ್ತು ಹೊರ ಮನಸ್ಸಿಗೆ ಮಿದುಳಿನಲ್ಲಿ ಸಣ್ಣ ಹೋರಾಟ ಪ್ರಾರಂಭವಾಗಿದೆ. ಸತ್ಯ ಗೊತ್ತಾಗಿದ್ದರೂ ಒಪ್ಪಿಕೊಳ್ಳಲು ಇಷ್ಟವಿಲ್ಲ. ನೆಗೆಟೀವ್ ಭಾವನೆಗಳು ಪ್ರಚೋದನೆಗೊಂಡು ಹೊರಬರಲು ಪ್ರಾರಂಭವಾಗುತ್ತದೆ. ’ ಈ ಸರ್ಕಾರ ಸರಿಯಿಲ್ಲ, ಈ ಡಾಕ್ಟರ್ ಸರಿಯಿಲ್ಲ, ಈ ನಮ್ಮ ಪೋಲೀಸ್ಯ್ ವ್ಯವಸ್ಥೆಯೇ ಸರಿಯಿಲ್ಲ, ಈ ಪತ್ರಿಕೆಯಲ್ಲಿ ಬರುವ ಸುದ್ದಿಗಳೆಲ್ಲಾ ಸರಿಯಿಲ್ಲ. ಈ ನಮ್ಮ ಮನೆಯ ಜನರೇ ಸರಿಯಿಲ್ಲ. ನನ್ನ ಮಗ/ಮಗಳು ಸರಿಯಿಲ್ಲ, ನನ್ನ ಹೆಂಡತಿ / ಗಂಡ ಸರಿಯಿಲ್ಲ. ಇಂಥಾ ನೆಗೆಟೀವ್ ಭಾವನೆಗಳು ಹೊರಬಂದಾಗ, ಸರ್ಕಾರ ಪೋಲೀಸು ಕೈಗೆ ಸಿಗುವುದಿಲ್ಲವಾದ್ದರಿಂದ ಮನೆಯಲ್ಲಿ ಕೈಗೆ ಸಿಗುವ ಸದಸ್ಯರ ಮೇಲೆ ದೋಷಾರೋಪಣೆ, ಜಗಳ, ವಾಗ್ವಾದ, ಅಳು, ದ್ವೇಷ ಹೀಗೆ ಮಿದುಳನ್ನು ಘಾಸಿಗೊಳಿಸುವ ನಡವಳಿಕೆ ಕಂಡು ಬರುತ್ತದೆ. ಇದು ಕಾರಣ ಹೀನ ನಡವಳಿಕೆ.
ಆಯಾಮ 3 – ಪಲಾಯನ – ಅಂದರೆ ಸಮಸ್ಯೆಯಿಂದ ಮಾನಸಿಕವಾಗಿ ದೂರ ಓಡಿಹೋಗುವ ಪ್ರಯತ್ನವನ್ನು ಮಾಡುವುದು. ಇದಕ್ಕಾಗಿ ಬೇರೆ ಶಕ್ತಿಯ ಆಸರೆಯನ್ನು ತೆಗೆದುಕೊಂಡು, ’ ಇನ್ನು ನನಗೆ ಭಯವಿಲ್ಲ , ಎಂದು ಭಾವಿಸುವುದು. ಒಳ ಮನಸ್ಸಿಗೆ ಸತ್ಯದ ಗೋಚರ ಸ್ಪಷ್ಟವಾಗಿ ಉಂಟಾಗಿ ಹೊರಮನಸ್ಸನ್ನು ಎಚ್ಚರಿಸಲು ತೊಡಗಿದಾಗ, ಆಗಲೂ ಹೊರ ಮನಸ್ಸು ಸತ್ಯವನ್ನು ಸಂಪೂರ್ಣವಾಗಿ ಒಪ್ಪಲು ಸಿದ್ಧವಿಲ್ಲದಾಗ ಈ ಪಲಾಯನ ಆಯಾಮ ತೆರೆದುಕೊಳ್ಳುತ್ತದೆ, ’ ಮನೆಮಂದಿಯೆಲ್ಲಾ ತಮ್ಮ ಮನೆದೇವರಿಗೆ ಮುಡಿಕೊಡುತ್ತೇವೆಂದು ಹರಸಿಕೊಳ್ಳುವುದು, ಮನೆಯಲ್ಲಿ ಹವನ, ಹೋಮಗಳನ್ನು ಏರ್ಪಡಿಸುವುದು, ಸಂತರ್ಪಣೆಗಳನ್ನು ಮಾಡುವುದು ’ ಇತ್ಯಾದಿ. ಈಗ ಮಠಾಧಿಪತಿಗಳು, ಮುಖಂಡರೂ ಇದನ್ನೇ ಮಾಡುತ್ತಾ “ ಎಲ್ಲರ ಕ್ಷೇಮಕ್ಕಾಗಿ ನಾವು ಮಾಡುತ್ತಿದ್ದೇವೆ “ ಎಂದು ಹೇಳುತ್ತಾರೆ. ಇರಲಿ, ಇದನ್ನು ಒಳ್ಳೆಯ ಆಶಯವೆಂದೇ ಭಾವಿಸೋಣ. ’ ಮನುಷ್ಯನ ಶಕ್ತಿಯನ್ನು ಮೀರಿದ ಒಂದು ಅಸಾಧಾರಣ ಶಕ್ತಿಯಿದೆ, ಅದನ್ನು ದೇವರು ಎಂದು ಕರೆಯುತ್ತೇವೆ, ದೇವರು ಪೂಜೆ ಪುರಸ್ಕಾರಗಳನ್ನು ಮಾಡಿದರೆ ಒಲಿದು ಮನುಷ್ಯನನ್ನು ಕಾಪಾಡುತ್ತಾನೆ ’ ಎನ್ನುವ ಮನಸ್ಥಿತಿಯನ್ನೂ ಗೌರವಿಸೋಣ. ಆದರೆ ಹೀಗೆ ಮಾಡಿದಾಕ್ಷಣ ಸಮಸ್ಯೆ ಪರಿಹಾರವಾಗಿಯೇ ಹೋಯಿತು ಎಂದು ನಂಬುವುದು, ಮತ್ತು ’ ನಾವು ಹೀಗೆ ಪೂಜೆ ಇತ್ಯಾದಿಗಳನ್ನು ಮಾಡಿರುವುದರಿಂದ ಯಾವ ನಿಯಮವನ್ನೂ ಪಾಲಿಸಬೇಕಾಗಿಲ್ಲ, ಏಕೆಂದರೆ ಕರೊನಾ ನಮಗೆ ಬರುವುದಿಲ್ಲ ’ ಎಂದು ವಾದಿಸಿದರೆ ಅದು ಶುದ್ಧ ಮೂರ್ಖತನ. ಮತ್ತು ಇದು ತರ್ಕಹೀನ ನಡವಳಿಕೆ. ಶಾರೀರಿಕವಾಗಿ ದೂರವಾಗುವುದು ರಕ್ಷಣಾ ಮಾರ್ಗ. ಉದಾಹರಣೆಗೆ ನಗರಗಳಲ್ಲಿದ್ದ ಕೂಲಿಗಾರರು ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದು ರಕ್ಷಣಾ ಮಾರ್ಗ. ಅದು ಸರಿಯಾದ ಮಾರ್ಗ. ಮಾನಸಿಕವಾಗಿ ಪೂಜೆ ಪುರಸ್ಕಾರಗಳಿಂದ ಸಮಸ್ಯೆ ದೂರವಾಯಿತು ಎಂದು ಭಾವಿಸುವುದು ಅಸತ್ಯ ಮಾರ್ಗ.
ಆಯಾಮ 4 – ವಾಸ್ತವದ ಅರಿವು – ಈ ಮೇಲಿನ ಮೂರೂ ಆಯಾಮಗಳಲ್ಲಿ ತೊಳಲಾಡಿದ ಮಿದುಳಿಗೆ ಸತ್ಯ ಹೃದ್ಗತವೇ ಆದಾಗ, ಹೊರಮನಸ್ಸೂ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. “ ನಾನು ಏನೆಲ್ಲಾ ಹಾರಾಡಿದರೂ ಈ ಸಮಸ್ಯೆಯಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ, ಆದ್ದರಿಂದ ಸಮಸ್ಯೆಯನ್ನು ಎದುರಿಸಲೇ ಬೇಕು, ಎದುರಿಸುವುದೇ ಆದರೆ ಸರಿಯಾಗಿಯೇ ಅಂದರೆ ವೈಜ್ಞಾನಿಕವಾಗಿಯೇ ಎದುರಿಸೋಣ “ ಎನ್ನುವ ನಿಲುವನ್ನು ಮಿದುಳು ತೆಗೆದುಕೊಳ್ಳುತ್ತದೆ. ಈಗ ವೈಚಾರಿಕ ಅರಿವು ಜಾಗೃತವಾಗುತ್ತದೆ. ಸುತ್ತಲಿನ ಎಚ್ಚರಿಕೆಗಳನ್ನು ಗಮನಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಸರ್ಕಾರ ಏನು ಹೇಳುತ್ತಿದೆ? ವೈದ್ಯರು ಏನು ಹೇಳುತ್ತಿದ್ದಾರೆ? ಪೋಲೀಸರು ಯಾವ ನಿಯಮ ಮಾಡಿದ್ದಾರೆ? ನಾವು ಯಾವುದನ್ನು ಪಾಲಿಸಬೇಕು? ಮುಂತಾದ ಚಿಂತನೆ ಶುರುವಾಗುತ್ತದೆ. ಮೊದಲೇ ವೈಜ್ಞಾನಿಕವಾಗಿ ಚಿಂತಿಸುವ ಶಕ್ತಿ ಇರುವವರು ಈ ಮೇಲಿನ ಮೂರೂ ಆಯಾಮಗಳಲ್ಲಿ ತೊಳಲಾಡುವುದಿಲ್ಲ. ನೇರವಾಗಿ ನಿಜಸ್ಥಿತಿಯನ್ನು ಅರಿಯುತ್ತಾರೆ. ಮತ್ತು ಕುಟುಂಬದಲ್ಲಿ ಒಬ್ಬರಿಗೆ ಇಂಥಾ ತಿಳಿವಳಿಕೆಯಿದ್ದರೂ ಅವರು ತಮ್ಮ ಇಡೀ ಕುಟುಂಬವನ್ನು ಸರಿದಾರಿಯಲ್ಲಿ ಮುನ್ನಡೆಸುತ್ತಾರೆ.
ಈ ನಾಲ್ಕೂ ಮೆದುಳಿನ ಆಯಾಮಗಳ ಅರಿವಿನೊಂದಿಗೆ ಕುಟುಂಬವ್ಯವಸ್ಥೆಯನ್ನು ಗಮನಿಸೋಣ. ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳಿದ್ದಾರೆ ಎಂದು ಭಾವಿಸೋಣ. ಮಕ್ಕಳು ಹದಿಹರೆಯದವರು. ಮಗ ಮೊದಲ ಆಯಾಮದಲ್ಲಿದ್ದು ’ ನಮಗೆ ಏನೂ ಆಗುವುದಿಲ್ಲ ’ ಎಂದೇ ವಾದಿಸುತ್ತಾನೆ. ಮಗಳು ಎರಡನೇ ಆಯಾಮದಲ್ಲಿದ್ದು, ನೆಗೆಟೀವ್ ಭಾವನೆಗಳಿಂದ ಒಮ್ಮೆ ಅಕಾರಣ ಕೋಪ, ಒಮ್ಮೆ ಅಳು ಇತ್ಯಾದಿಗಳಿಂದ ಉಳಿದವರಿಗೆ ಕರಿಕಿರಿ ಉಂಟುಮಾಡುತ್ತಿದ್ದಾಳೆ. ಹೆಂಡತಿ ಮೂರನೇ ಆಯಾಮದಲ್ಲಿದ್ದು ’ ಪೂಜೆ ಪುರಸ್ಕಾರ, ಕೇಶಮುಂಡನ ’ ಮುಂತಾದ ವಾದ ನಡೆಸಿದ್ದಾಳೆ. ಗಂಡ ಇವರೆಲ್ಲರಿಂದ ಮತ್ತಷ್ಟೂ ಗೊಂದಲಕ್ಕೆ ಒಳಗಾಗಿ ತನ್ನ ’ ಯಜಮಾನ ’ ಎನ್ನುವ ದರ್ಪ ಬಳಸಿ ಕೂಗಾಟವೋ ಕಿರುಚಾಟವೋ ಮಾಡಿಕೊಂಡು ಮನೆಯ ಪರಿಸ್ಥಿತಿಯನ್ನು ತನ್ನ ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದಾನೆ. ಇಂಥಾ ಮನೆಯಲ್ಲಿ ’ ನೆಮ್ಮದಿ ’ ಎನ್ನುವುದು ಸ್ಥಿರವಾಗಿ ನಿಲ್ಲಲು ಹೇಗೆ ತಾನೆ ಸಾಧ್ಯ? ಈ ಕಾರಣವಾಗಿಯೇ ಇಂದು ಪ್ರತಿ ಮನೆಯೂ ಕುರುಕ್ಷೇತ್ರವಾಗಿದೆ. ವಿವೇಕವಿಲ್ಲದೇ ತಮಗೆ ತಾವೇ ಅಶಾಂತಿಯನ್ನು ಹರಡಿಕೊಳ್ಳುತ್ತಿದ್ದಾರೆ.
ಮನೆಯಲ್ಲಿ ಒಬ್ಬರಿಗಾದರೂ ನಾಲ್ಕನೇ ಆಯಾಮವಾದ – ವಾಸ್ತವದ ಅರಿವು – ಇದ್ದರೆ ಅವರು ಉಳಿದವರ ನೆಗೆಟೀವ್ ಮೈಂಡ್ಸೆಟ್ಅನ್ನು ಬದಲಿಸಲು ಸಾಧ್ಯವಿದೆ. ಏಕೆಂದರೆ ವಾಸ್ತವದ ಅರಿವಿನಲ್ಲಿ ವಿವೇಚನೆಯಿರುತ್ತದೆ. ಸತ್ಯವೆನ್ನುವುದು ಯಾವಾಗಲೂ ಶಾಂತಿಯುತವಾಗಿಯೇ ಇರುತ್ತದೆ. ಗೊಂದಲಗೊಂಡವರನ್ನು ಸಮಾಧಾನ ಮಾಡುವ, ’ನಾನಿದ್ದೇನೆ ’ ಎನ್ನುವ ಭರವಸೆಯನ್ನು ಕೊಡುವುದರ ಮೂಲಕ ತಮ್ಮಲ್ಲಿರುವ ನೆಮ್ಮದಿಯನ್ನು ಇತರರಿಗೂ ಹಂಚಲು ಸಾಧ್ಯವಾಗುತ್ತಾರೆ.
ಈಗ ನಮ್ಮೆಲ್ಲರ ಮುಂದೆ ಇರುವ ಚಾಲೆಂಜ್ ಏನೆಂದರೆ, ನಮ್ಮ ಮನೆಯ ಸದಸ್ಯರು ಯಾವ ಆಯಾಮದಲ್ಲಿದ್ದಾರೆ ಎನ್ನುವುದನ್ನು ಗಮನಿಸುವುದು ಮತ್ತು ಎಲ್ಲರನ್ನೂ ನಾಲ್ಕನೇ ಆಯಾಮಕ್ಕೆ ತರುವುದು.
ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್ ಐಡಿ: shanthanag@gmail.com / lalitha.vijayavani@gmail.com