ಅಂತಾರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡಿಗರ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್!

Nandini Products
Published on

ಬೆಂಗಳೂರು: ಬೆಲೆ ಏರಿಕೆ ಹಾಗೂ ತಿರುಪತಿ ಲಡ್ಡುಗೆ ತುಪ್ಪ ನಿಷೇಧ ವಿಚಾರದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಸುದ್ದಿಯಲ್ಲಿರುವ ನಂದಿನಿ ಈಗ ಮತ್ತೆ ಸದ್ದು ಮಾಡುತ್ತಿದೆ. ಆದರೆ ಈ ಬಾರಿ ಸುದ್ದಿ ಆಗುತ್ತಿರುವುದು ಕನ್ನಡಿಗರು ಗರ್ವ ಪಡುವಂತಹ ವಿಚಾರಕ್ಕೆ.

ಹೌದು, ಈಗಾಗಲೇ ದೇಶದಲ್ಲಿ ಭಾರೀ ಬೇಡಿಕೆ ಸೃಷ್ಟಿ ಮಾಡಿರುವ ನಂದಿನಿ ಉತ್ಪನ್ನಗಳು ಇನ್ನು ಮುಂದೆ ಆಗಸದಲ್ಲೂ ಸಿಗಲಿವೆ. ಅಂದರೆ, ಅಂತಾರಾಷ್ಟ್ರೀಯ ವಿಮಾನಗಳಲ್ಲೂ ನಂದಿನಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

ಅಂತಾರಾಷ್ಟ್ರೀಯ ಏರ್​ಲೈನ್ಸ್​ಗಳಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಸಿಗಲಿವೆ. ನಂದಿನಿ ಉತ್ಪನ್ನಗಳಿಗಾಗಿ ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈಗಾಗಲೇ ದೇಶಿ ಏರ್​ಲೈನ್ಸ್​​ಗಳಲ್ಲಿ ಪೂರೈಕೆಯನ್ನು ಕೆಎಂಎಫ್​ ಆರಂಭಿಸಿದೆ.

ಸಿಂಗಾಪೂರ್ ಮತ್ತು ಫ್ರಾನ್ಸ್​ ವಿಮಾನ ಕಂಪನಿಗಳು ನಂದಿನಿ ಬಟರ್ ಕಪ್​ಗಳನ್ನು ಪೂರೈಸುವಂತೆ ಕೆಎಂಎಫ್​ಗೆ ಮನವಿ ಮಾಡಿದೆ. ಸದ್ಯ ಈ ಏರ್​ಲೈನ್ಸ್​ಗಳಲ್ಲಿ ಅಮೂಲ್ ಬಟರ್ ಕಪ್​ಗಳು ಬಳಕೆಯಾಗುತ್ತಿವೆ. ಈಗ ನಂದಿನಿ ಉತ್ಪನ್ನಗಳಿಗಾಗಿ ವಿಮಾನ ಕಂಪನಿಗಳು ಮನವಿ ಮಾಡಿವೆ. ಪೂರೈಕೆ ಕೆಎಂಎಫ್ ಕೂಡ ಸಿದ್ದವಿದ್ದು, ಸದ್ಯದಲ್ಲೇ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ.

ಈಗಾಗಲೇ ವಂದೇ ಭಾರತ್ ರೈಲಿನಲ್ಲೂ ನಂದಿನಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಸಂಚಾರ ಮಾಡುವ ಎರಡು ರೈಲುಗಳಿಗೆ ನಂದಿನಿ ಕೋಲ್ಡ್ ಮಿಲ್ಕ್ ಮತ್ತು ಬಟರ್ ಪ್ಯಾಕೆಟ್ ಪೂರೈಕೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಹೆಚ್ಚಿನ ಉತ್ಪನ್ನಗಳಿಗೆ ಬೇಡಿಕೆ ಇಟ್ಟರೆ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ. ಈ ಮೂಲಕ ನಂದಿನಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net