

ಸಾಗರ: ನಂದಿನಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಈ ಮೂಲಕ ಸ್ವಯಂ ಉದ್ಯೋಗಿಗಳು ಆರ್ಥಿಕ ಚೈತನ್ಯ ಹೊಂದಲು ಸಾಧ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪಶುವೈದ್ಯಕೀಯ ಆಸ್ಪತ್ರೆ ಬಳಿ ಭಾನುವಾರ ನಂದಿನಿ ಉತ್ಪನ್ನಗಳ ಸ್ಕೂಪ್ ಪಾರ್ಲರ್ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ನಂದಿನಿ ಪಾರ್ಲರ್ ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದರು.
ಸಾಗರದಲ್ಲಿ ಶಿಮುಲ್‌ನ ನಂದಿನಿ ಪಾರ್ಲರ್‌ಗಳನ್ನು ಬಿ.ಎಚ್.ರಸ್ತೆ, ತಾಯಿ-ಮಗು ಆಸ್ಪತ್ರೆ, ಉಪವಿಭಾಗೀಯ ಆಸ್ಪತ್ರೆ, ಬಸ್ ನಿಲ್ದಾಣ, ರಿಪ್ಪನಪೇಟೆಯಲ್ಲಿ ಎರಡು ಕಡೆ ಆರಂಭಿಸಲಾಗಿದೆ. ಜತೆಗೆ ಆನಂದಪುರ, ಹೊಸನಗರ ಇನ್ನಿತರೆ ಭಾಗಗಳಲ್ಲಿ ಆರಂಭಿಸಲು ಮನವಿ ಸಲ್ಲಿಸಲಾಗಿದೆ. ಶಿಮುಲ್ ಅಧ್ಯಕ್ಷ ವಿದ್ಯಾಧರ ಅವರು ನಮ್ಮ ಕ್ಷೇತ್ರವ್ಯಾಪ್ತಿಗೆ ಹೆಚ್ಚಿನ ಪಾರ್ಲರ್ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು
ಹತ್ಯೆ ವಿಚಾರದಲ್ಲಿ ರಾಜಕೀಯ ಸಲ್ಲ: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಘಟನೆ ಖಂಡನೀಯ. ಯಾರೂ ಯಾರನ್ನೂ ಕಲೆ ಮಾಡುವ ಕ್ರೂರತ್ವಕ್ಕೆ ಇಳಿಯಬಾರದು. ಈ ಹಿಂದೆ ಪ್ರವೀಣ್ ನೆಟ್ಟಾರು, ನಂತರ ಮುಸ್ಲಿಂ ಯುವಕ ಫಾಜಿಲ್‌ನ ಹತ್ಯೆ ನಡೆಯಿತು. ಇದೀಗ ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿದೆ. ಇದಾದ ನಂತರ ನಂತರ ಕೆಲವರಿಗೆ ಚೂರಿ ಇರಿತ ಪ್ರಕರಣಗಳು ನಡೆದಿವೆ. ಯಾವುದೇ ರಾಜಕೀಯ ಪಕ್ಷಗಳು ಈ ವಿಚಾರವಾಗಿ ರಾಜಕೀಯ ಮಾಡಬಾರದು. ಆರೋಪಿಗಳನ್ನು ಬಂಧಿಸುವ ಜತೆಗೆ ಗುಂಡಿಟ್ಟು ಕೊಲ್ಲಬೇಕು. ಸಾಮರಸ್ಯ ಕದಡುವವರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಶಾಸಕ ಬೇಳೂರು ಒತ್ತಾಯಿಸಿದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿ, ಸಾಗರ ಕ್ಷೇತ್ರಕ್ಕೆ ಆರು ತಿಂಗಳಿನಲ್ಲಿ ಹೆಚ್ಚಿನ ನಂದಿನಿ ಪಾರ್ಲರ್‌ಗಳನ್ನು ನೀಡಲಾಗಿದೆ. ಪ್ರತಿ ಪಾರ್ಲರ್‌ನಲ್ಲೂ 200ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ ಇರುತ್ತವೆ. ಮುಂಜಾನೆ 6ರಿಂದ ರಾತ್ರಿ 11ರವರೆಗೆ ತೆರೆದಿರುತ್ತವೆ. ಇದರಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತವೆ. ಸಾಗರ, ಹೊಸನಗರ ತಾಲೂಕಿನಲ್ಲಿ ಇನ್ನಷ್ಟು ಪಾರ್ಲರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಜಾಕೀರ್, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್, ಪ್ರಮುಖರಾದ ಕೆ.ಸಿದ್ದಪ್ಪ, ಚೇತನರಾಜ್ ಕಣ್ಣೂರು, ಸುರೇಶಬಾಬು, ಜಯರಾಮ್, ರವೀಂದ್ರ ಸಾಗರ್, ಬೀರೇಶ್, ಅನಿಲಕುಮಾರ್ ಇತರರಿದ್ದರು.