ಒಂದು ತಿಂಗಳು 'ನಂದಿಗಿರಿಧಾಮ' ಬಂದ್! ಕಾರಣ ಏನಿರಬಹುದು? Nandi hills

nandi hills
Published on

Nandi hills | ಒಂದು ರೌಂಡ್​ ಹಾಗೇ ಸುತ್ತಾಡಿಕೊಂಡು ಬರೋಣ ಎಂದು ನೀವೇನಾದರೂ ನಂದಿಗಿರಿಧಾಮಕ್ಕೆ ಹೋಗೋ ಪ್ಲಾನ್​ ಮಾಡಿದ್ದೀರಾ, ಹಾಗಿದ್ರೆ ಈ ಸುದ್ದಿಯನ್ನು ನೀವು ಗಮನಿಸಲೇಬೇಕು. ಯಾಕಂದ್ರೆ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾದ ನಂದಿಗಿರಿಧಾಮವನ್ನು ಒಂದು ತಿಂಗಳ ಕಾಲ ಬಂದ್​ ಮಾಡಲಾಗಿದೆ. ರಸ್ತೆ ನವೀಕರಣ, ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಒಂದು ತಿಂಗಳು ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.

ನಂದಿಗಿರಿಧಾಮದ ಅಂಕು ಡೊಂಕಿನ ರಸ್ತೆಯನ್ನು ಸರಿಪಡಿಸಿ ಡಾಂಬರೀಕರಣ ಮಾಡುವ ಉದ್ದೇಶದಿಂದ ಮಾರ್ಚ್ 24 ರಿಂದ ಏಪ್ರಿಲ್ 25 ರವರೆಗೂ 1 ತಿಂಗಳ ಕಾಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಆದ್ರೆ ವೀಕೆಂಡ್ ಶುಕ್ರವಾರ ಸಂಜೆ 6-30 ರಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾರದಲ್ಲಿ 5 ದಿನ ಅಂದರೆ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಹಾಗೂ ಶುಕ್ರವಾರ ವಾಹನಗಳ ಸಂಚಾರ ಬಂದ್ ಮಾಡುವುದಾಗಿ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲು ಬೆಟ್ಟದ ಕ್ರಾಸ್​ನಿಂದ ಬೆಟ್ಟದ ಮೇಲ್ಬಾಗದವರೆಗೆ ಸರಿಸುಮಾರು 7 ಮುಕ್ಕಾಲು ಕಿಲೋಮೀಟರ್ ದೂರದವರೆಗೂ ರಸ್ತೆ ಹದಗೆಟ್ಟಿದೆ. ಆದ್ದರಿಂದ ಸಂಪೂರ್ಣವಾಗಿ ರಸ್ತೆಗೆ ಮರು ಡಾಂಬರೀಕರಣ ಮಾಡುವುದು ಅನಿವಾರ್ಯವಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ 5 ದಿನಗಳ ಕಾಲ ವಾಹನಗಳ ಸಂಚಾರ ಬಂದ್​ ಮಾಡಲಾಗ್ತಾ ಇದೆ. ಹಾಗೇ ಇದೇ ದಿನಗಳಲ್ಲಿ ಮಾತ್ರ ಅತಿಥಿ ಗೃಹಗಳ ಬುಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ.

ವಾರಾಂತ್ಯದ ದಿನಗಳಲ್ಲಿ ಅಂದರೆ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 08 ಗಂಟೆ ವರೆಗೆ ಮಾತ್ರ ವಾಹನ ಸಂಚಾರ ಮಾಡಲು ಅನುವು ಮಾಡಿಕೊಡಲಾಗಿದೆ. ಇನ್ನುಳಿದ ವಾರದ ಐದೂ ದಿನಗಳಲ್ಲಿ ವಾಹನಗಳು ಓಡಾಡದಂತೆ ತಿಳಿಸಲಾಗಿದೆ. ಕೇವಲ 1 ತಿಂಗಳು ಮಾತ್ರ ನಂದಿಗಿರಿಧಾಮ ಬಂದ್ ಮಾಡಲಾಗಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಕಾಮಗಾರಿ ಮಾಡಿ ಮುಗಿಸಿ ಎಂದು ಲೋಕೋಪಯೋಗಿ ಇಲಾಖೆಗೆ ಡಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net