

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಶೆಮುಕ್ತ ಭಾರತಕ್ಕಾಗಿ ಘೋಷವಾಕ್ಯದಡಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿವಮೊಗ್ಗ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ರನ್ ಮ್ಯಾರಥಾನ್ ಯಶಸ್ವಿಯಾಯಿತು. ಸಾವಿರಾರು ಜನರು ಹೆಜ್ಜೆ ಹಾಕುವ ಮೂಲಕ ಮ್ಯಾರಥಾನ್‌ಗೆ ಮೆರುಗು ನೀಡಿದರು.
ನಗರದ ಶಿವಮೂರ್ತಿ ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮ್ಯಾರಥಾನ್‌ಗೆ ಚಾಲನೆ ನೀಡಿದರು. ನೆಹರು ಕ್ರೀಡಾಂಗಣ, ಮಹಾವೀರ ವೃತ್ತ, ಬಿ.ಎಚ್.ರಸ್ತೆ, ಶಿವಪ್ಪನಾಯಕ ವೃತ್ತ, ಟಿ.ಸೀನಪ್ಪಶೆಟ್ಟಿ ವೃತ್ತ, ಜೈಲ್ ವೃತ್ತ, ಕುವೆಂಪು ರಸ್ತೆ ಮಾರ್ಗವಾಗಿ ತೆರಳಿ ನೆಹರು ಕ್ರೀಡಾಂಗಣದಲ್ಲಿ ಮ್ಯಾರಥಾನ್ ಮುಕ್ತಾಯಗೊಂಡಿತು. ಬಿಳಿ ಟೀ ಶರ್ಟ್ ಧರಿಸಿ 3.5 ಕಿ.ಮೀ. ದೂರದ ಮ್ಯಾರಥಾನ್ ಅನ್ನು ಸ್ಪರ್ಧಿಗಳು ಉತ್ಸಾಹದಿಂದ ಪೂರೈಸಿದರು. ಕ್ಯೂಆರ್ ಕೋಡ್ ಮೂಲಕ 4,800ಕ್ಕೂ ಅಧಿಕ ಜನರು ಮ್ಯಾರಥಾನ್‌ಗೆ ನೋಂದಣಿ ಮಾಡಿಕೊಂಡಿದ್ದರು. ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ಧಾರವಾಡ, ಹಾವೇರಿ ಸೇರಿ ಹಲವು ಜಿಲ್ಲೆಗಳಿಂದ ಸ್ಪರ್ಧಾಳುಗಳು ಬಂದಿದ್ದರು. ಬಂದ ಸ್ಪರ್ಧಿಗಳಿಗೆ ಉಚಿತವಾಗಿ ಟೀ ಶರ್ಟ್ ವಿತರಿಸಲಾಯಿತು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಶಾಸಕ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎನ್.ಜೆ.ನಾಗರಾಜ್, ಸಿ.ಎಚ್.ಮಾಲತೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪಾಲಿಕೆ ಮಾಜಿ ಸದಸ್ಯ ರಾಹುಲ್ ಬಿದರೆ ಮತ್ತಿತರರು ಪಾಲ್ಗೊಂಡಿದ್ದರು.
ವಿಕಸಿತ ಭಾರತದ ಕಲ್ಪನೆಯಲ್ಲಿ ಪಾಲ್ಗೊಳ್ಳಲು ಯುವಜನರು ನಶೆ ಮುಕ್ತರಾಗಬೇಕು. ಭವಿಷ್ಯದ ಭಾರತಕ್ಕೆ ಯುವ ಶಕ್ತಿ ಅಗತ್ಯ ಇದೆ. ಹಾಗಾಗಿ ದುಶ್ಚಟದಿಂದ ದೂರ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಕೊಟ್ಟಿದ್ದಾರೆ. ಅವರ ಆಲೋಚನೆಯನ್ನು ಸಾಕಾರ ಮಾಡುವುದು ಯುವಜನರ ಕರ್ತವ್ಯವಾಗಿದೆ. -ಧೀರಜ್ ಮುನಿರಾಜ್, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ