ರ‍್ಯಾಪಿಡ್ ಎಕ್ಸ್ ರೈಲಿನ ಸೌಲಭ್ಯ, ವೇಗವನ್ನು ಮೆಚ್ಚಿದ ಪ್ರಯಾಣಿಕರು; ರೈಲಿನ ವಿಶೇಷತೆಗಳೇನು?

RapidX
Published on

ನವದೆಹಲಿ: ದೇಶದ ಮೊಟ್ಟಮೊದಲ ರ‍್ಯಾಪಿಡ್ ಎಕ್ಸ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಅವರು ಅಕ್ಟೋಬರ್​​ 20 ರಂದು ಹಸಿರು ನಿಶಾನೆ ತೋರಿದರು. ವಂದೇ ಭಾರತ್ ರೈಲಿನ ವೇಗಕ್ಕೆ ಸರಿಸಮನಾಗಿ ಸಂಚರಿಸುವ ಮತ್ತೊಂದು ಸೆಮಿ ಸ್ಪೀಡ್ ರೈಲು ಇದಾಗಿದೆ. ರ‍್ಯಾಪಿಡ್ ಎಕ್ಸ್ ರೈಲಿನ ವಿಶೇಷತೆ ಕುರಿತಾಗಿ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿ- ಗಾಜಿಯಾಬಾದ್-ಮೀರತ್ ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್​ಆರ್​ಟಿಎಸ್- ಪ್ರಾದೇಶಿಕ ತ್ವರಿತ ಸಂಚಾರ ವ್ಯವಸ್ಥೆ) ಯೋಜನೆಯಡಿ ರ‍್ಯಾಪಿಡ್ ಎಕ್ಸ್ ರೈಲಿನ ಮೊದಲ ಪ್ರಯಾಣವು ಉತ್ತರ ಪ್ರದೇಶದ ಸಾಹಿಬಾಬಾದ್​ನಿಂದ ದುಹೈ ಡಿಪೋವರೆಗೆ ನಡೆಯಿತು. ಪ್ರಧಾನಿ ಮೋದಿ ಸಹ ಮೊದಲ ಸಂಚಾರ ಅನುಭವನ್ನು ಪಡೆದಿದ್ದಾರೆ. ಈ ರೈಲಿನಲ್ಲಿ ಪ್ರಯಾಣಿಸಿದ ಅನುಭವದ ಕುರಿತಾಗಿ ಪ್ರಯಾಣಿಕರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ರೈಲಿನ ವೇಗದ ಕುರಿತಗಾಗಿ ಸಂತೋಷದಿಂದ ಮಾತನಾಡಿದ ಪ್ರಯಾಣಿಕರೊಬ್ಬರು, ಇದು ಸಾಕಷ್ಟು ಪ್ರಯಾಣದ ಸಮಯವನ್ನು ಉಳಿಸುತ್ತದೆ. ಆಫೀಸ್‌ನಲ್ಲಿ ನನ್ನ ಹಾಜರಾತಿಯನ್ನು ಸಮಯಕ್ಕೆ ಸರಿಯಾಗಿ ಪಂಚ್​​ ಮಾಡಬೇಕು. ಇದು ಉತ್ತಮ ಸೌಲಭ್ಯವಿದೆ. ಪ್ರಯಾಣದ ಸಮಯ ಉಳಿತಾಯವಾಗುತ್ತದೆ ಎಂದು  ಹೇಳಿದ್ದಾರೆ.

ಹೊಸ ಅನುಭವವನ್ನು ಎಂಜಾಯ್​​ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಒಂದು ಗಂಟೆ ತೆಗೆದುಕೊಳ್ಳುವ ನನ್ನ ಪ್ರಯಾಣ ಅರ್ಧ ಗಂಟೆಯಲ್ಲಿ ಕವರ್ ಮಾಡಲಾಗುತ್ತಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ಸೌಲಭ್ಯಗಳು ಸಹ ಚೆನ್ನಾಗಿವೆ ಎಂದು ಇನ್ನೊಬ್ಬ ಪ್ರಯಾಣಿಕರು ಹೇಳಿದರು.

ರ‍್ಯಾಪಿಡ್ ಎಕ್ಸ್ ರೈಲಿನ ಹೆಸರು ಬಂದಿದ್ದು ಹೇಗೆ?:  ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC) ಕಳೆದ ಏಪ್ರಿಲ್‌ ತಿಂಗಳಲ್ಲಿ RRTS ರೈಲುಗಳಿಗೆ RAPIDX ಎಂದು ಹೆಸರಿಸಿತ್ತು. ಈ ಹೆಸರನ್ನು ಆಯ್ಕೆ ಮಾಡಲು ಹಲವಾರು ಕಾರಣಗಳಿವೆ. ಈ ಹೆಸರನ್ನು ಯಾವುದೇ ಭಾಷೆಯಲ್ಲಿ ಓದಲು ಮತ್ತು ಉಚ್ಚರಿಸಲು ಸುಲಭವಾಗಿದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆಯು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿರ್ವಹಿಸುವ ಜಂಟಿ ಉದ್ಯಮವಾಗಿದೆ. ಕಂಪನಿಯು ರ‍್ಯಾಪಿಡ್ ಎಕ್ಸ್ ರೈಲು ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಸೋಲರ್​ ಪ್ಯಾನಲ್​ಗಳನ್ನು ಅಳವಡಿಸುವುದು, ಬ್ಲೆಂಡೆಡ್​ ಪವರ್​ ಉಪಯೋಗವನ್ನು ಕ್ರಮೇಣ ಹೆಚ್ಚಿಸುವ ಮೂಲಕ ಗ್ರೀನ್​ ಎನರ್ಜಿಯನ್ನು ಬಳಸಲು ಯೋಜಿಸಲಾಗಿದೆ. ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ ಹಣವನ್ನು ನೀಡಿದೆ.

ರಾಪಿಡ್ಎಕ್ಸ್ ರೈಲಿನ ವಿಶೇಷತೆ?: ರಾಪಿಡ್ಎಕ್ಸ್ ರೈಲುಗಳು ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ. ರೈಲು ಗಂಟೆಗೆ 160 ಕಿಮೀ ಕಾರ್ಯಾಚರಣೆಯ ವೇಗವನ್ನು ಹೊಂದಿರುತ್ತದೆ. ಮಹಿಳಾ ಕೋಚ್ ಮತ್ತು ಪ್ರೀಮಿಯಂ ಕೋಚ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. RAPIDX ಒಬ್ಬ ರೈಲು ಅಟೆಂಡೆಂಟ್ ಅನ್ನು ಸಹ ಹೊಂದಿರುತ್ತದೆ. ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಎಂಬ ಐದು ನಿಲ್ದಾಣಗಳನ್ನು ಹೊಂದಿದೆ. RRTS ರೈಲುಗಳನ್ನು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲಿ ತ್ವರಿತ ನಗರ ಸಾರಿಗೆ ವ್ಯವಸ್ಥೆಯನ್ನು ಮಾಡುತ್ತದೆ. ಪ್ರತಿ ರೈಲು 2X2 ಲೇಔಟ್‌ನಲ್ಲಿ 407 ಆಸನಗಳನ್ನು ಹೊಂದಿರುತ್ತದೆ. ದೆಹಲಿ-ಮೀರತ್ ಕಾರಿಡಾರ್‌ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ಇದು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್​ಗೆ ಸಂಚರಿಸುತ್ತದೆ. RapidX ರೈಲು ಸುಮಾರು 1700 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯದೊಂದಿಗೆ ಆರು ಕೋಚ್‌ಗಳನ್ನು ಹೊಂದಿರುತ್ತದೆ. ಇದು ಪ್ರಯಾಣಿಕರಿಗೆ ಆಸನ ಮತ್ತು ನಿಂತುಕೊಳ್ಳಲು ಜಾಗವನ್ನು ಒಳಗೊಂಡಿದೆ.

ರಾಪಿಡ್ಎಕ್ಸ್  ಪ್ರತಿ ರೈಲಿನಲ್ಲಿ ಮೀಸಲಾದ ಮಹಿಳಾ ಕೋಚ್ ಅನ್ನು ಹೊಂದಿರುತ್ತದೆ. ಮಹಿಳೆಯರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಾದೇಶಿಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ದೆಹಲಿಯಿಂದ ಮೀರತ್‌ಗೆ ತೆರಳುವಾಗ ಎರಡನೇ ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಈ ಕಾಯ್ದಿರಿಸಿದ ಕೋಚ್ 72 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ರೈಲಿನ ಇತರ ಬೋಗಿಗಳಲ್ಲಿ ಹೆಚ್ಚುವರಿ 10 ಸೀಟುಗಳನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net