

ಮಂಗಳೂರು: ನಮ್ಮ ಕುಡ್ಲ ತುಳು ವಾಹಿನಿ ವತಿಯಿಂದ 24ನೇ ವರ್ಷದ ಗೂಡುದೀಪ ಸ್ಪರ್ಧೆ ನ.11ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಸಂಜೆ 4 ಗಂಟೆಯಿಂದ ನಡೆಯಲಿದೆ.
ಸ್ಪರ್ಧೆಯು ಯಾವುದೇ ವಯೋಮಾನದ ನಿಬರ್ಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದ 3 ವಿಜೇತರಿಗೆ ಬೆಳ್ಳಿಯ ಪದಕವನ್ನು ಹಾಗೂ ನೂರಕ್ಕಿಂತಲೂ ಹೆಚ್ಚು ಮೆಚ್ಚುಗೆ ಪಡೆದ ಸ್ಪರ್ಧಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳ ಜೊತೆಗೆ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆಯ ಜೊತೆಗೆ ಸಿಹಿತಿಂಡಿಯ ಪೊಟ್ಟಣ ಹಾಗೂ ಶ್ರೀ ಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು ಎಂದು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಹರೀಶ್ ಬಿ.ಕರ್ಕೇರಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಮುಂಚೂಣಿಯ ಬಿಲ್ಡರ್, ಯುವ ಸಾಧಕ ರೋಹನ್ ಮೊಂತೆರೋ ಅವರಿಗೆ ‘ನಮ್ಮ ಕುಡ್ಲ’ ಪ್ರಶಸ್ತಿ, ಕಂಬಳದ ಸಾಧಕ ಗುಣಪಾಲ ಕಡಂಬ ಅವರಿಗೆ ‘ನಮ್ಮ ತುಳುವೆರ್’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾವುದು. ತುಳುನಾಡಿನ ಸಂಘಸಂಸ್ಥೆಗಳಿಗೆ ನೀಡುವ ಬಿ.ಪಿ. ಕರ್ಕೇರಾ ಸೇವಾ ಪ್ರಶಸ್ತಿಯನ್ನು ಸಮಾಜ ಸೇವೆ, ಕ್ರೀಡೆ, ಧಾರ್ಮಿಕ ಸಂಘಟನೆ ಇತ್ಯಾದಿಯಲ್ಲಿ ಜನಮನ್ನಣೆ ಗಳಿಸಿರುವ ಕಂಕನಾಡಿ ಬಿಲ್ಲವ ಸಂಘಕ್ಕೆ ನೀಡಿ ಗೌರವಿಸಲಾಗುವುದು. ಯಕ್ಷಗಾನದ ಯುವ ಹಾಸ್ಯ ಕಲಾವಿದ ದಿನೇಶ್ ಕೊಡಪದವು ಅವರಿಗೆ ನಮ್ಮ ಕುಡ್ಲ ವಿಶೇಷ ಸನ್ಮಾನಗಳೊಂದಿಗೆ ಗೌರವಿಸಲಾಗುವುದು ಎಂದು ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಸಂಜೆ 4 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು, ಕ್ಷೇತ್ರದ ಸುತ್ತಲೂ ಕಂಗೊಳಿಸುವ ಗೂಡುದೀಪಗಳ ದೃಶ್ಯ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ತಿಳಿಸಿದರು.
ಸಂಘಟಕರಾದ ಪ್ರೊ.ಎಂ.ಎಸ್.ಕೋಟ್ಯಾನ್, ದಯಾನಂದ ಕಟೀಲ್, ಮೋಹನ್ ಬಿ.ಕರ್ಕೇರಾ, ಲೀಲಾಕ್ಷ ಬಿ.ಕರ್ಕೇರಾ ಸುದ್ದಿಗೋಷ್ಠಿಯಲ್ಲಿದ್ದರು.