ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶಿಸಿರುವ, ಯಶ್ ಜತೆ ಅಮಿತ್ ಮಲ್ಹೋತ್ರಾ ನಿರ್ಮಿಸಿರುವ ಪ್ಯಾನ್ ವರ್ಲ್ಡ್ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕೊನೆ ಘಳಿಗೆಯಲ್ಲಿ ಮುಂದೂಡಲಾಗಿದೆ. ಶುಕ್ರವಾರ ಬೆಳಗ್ಗೆ ರಿಲೀಸ್ ಆಗಬೇಕಿದ್ದ ಟ್ರೇಲರ್, ಚಿತ್ರತಂಡದ ಹೊಸ ಒಪ್ಪಂದದಿಂದಾಗಿ ಮುಂದಕ್ಕೆ ಹೋಗಿದೆ. ಕಳೆದ 18ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಆಯ್ದ ಗಣ್ಯರಿಗಷ್ಟೇ ಸಿನಿಮಾದ ಟ್ರೇಲರ್ ತೋರಿಸಲಾಗಿತ್ತು. ಹಾಗೆಯೇ, ಶುಕ್ರವಾರ ಜಾಲತಾಣಗಳಲ್ಲಿ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಚಿತ್ರತಂಡವು ಸೋನಿ ಪಿಕ್ಚರ್ ಎಂಟರ್‌ಟೈನ್‌ಮೆಂಟ್ ಜತೆಗೆ ಜಾಗತಿಕ ಸಿನಿಮಾ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ರಕಟಣೆ ಮೂಲಕ ಅದನ್ನು ಘೋಷಿಸಿದ್ದು, ‘‘ರಾಮಾಯಣ’ ಚಿತ್ರತಂಡಕ್ಕೆ ಈ ದಿನ ವಿಶೇಷವಾದುದು. ‘ರಾಮಾಯಣ’ವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ನನ್ನ ಕನಸಿಗೆ ಸೋನಿ ಪಿಕ್ಚರ್ ಎಂಟರ್‌ಟೈನ್‌ಮೆಂಟ್ ಜತೆಯಾಗಿದೆ. ಆ ಸಂಸ್ಥೆ ಜತೆ ನಾವು ಜಾಗತಿಕ ರಿಲೀಸ್‌ಗೆ ಒಪ್ಪಂದ ಮಾಡಿಕೊಂಡಿದ್ದೇವೆ. 100 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ಕ್ಷಣ. ಹಾಲಿವುಡ್ ಸಿನಿಮಾದಂತೆ ನಮ್ಮ ಚಿತ್ರ ಕೂಡ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಆ ಮೂಲಕ ವಿಶ್ವದ ಜನತೆಗೆ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಕಥೆಗಳನ್ನು ನೋಡಲು ತೆರೆದ ಬಾಗಿಲು ಇದಾಗಲಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಇದೇ ದೀಪಾವಳಿಗೆ ಮೊದಲನೇ ಭಾಗ ರಿಲೀಸ್ ಆಗಲಿದೆ. ಸನ್ನಿ ಡಿಯೋಲ್, ಶೋಭನಾ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ರವಿ ದುಬೆ ಸೇರಿ ಹಲವರು ತಾರಾಗಣದಲ್ಲಿದ್ದಾರೆ.