

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ‘ಶಿಕ್ಷಕ ಮಿತ್ರ’ ತಂತ್ರಾಂಶದ ಹೆಸರನ್ನು ‘ಸೇವಾ ಮಿತ್ರ’ ಎಂದು ಬದಲಾಯಿಸಿದೆ.
ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ವ್ಯಕ್ತಿ ಸಂಬಂಧಿತ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಲು ‘ಶಿಕ್ಷಕ ಮಿತ್ರ’ ತಂತ್ರಾಂಶವನ್ನು ಬಳಸಲಾಗುತ್ತಿದೆ.
ಈ ತಂತ್ರಾಂಶದಲ್ಲಿ ಬೋಧಕ ಹಾಗೂ ಬೋಧಕೇತರರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ‘ಶಿಕ್ಷಕ ಮಿತ್ರ’ ಹೆಸರನ್ನು ‘ಸೇವಾ ಮಿತ್ರ’ ಎಂದು ಬದಲಿಸಲಾಗಿದೆ ಎಂದು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ಸುತ್ತೋಲೆ ಹೊರಡಿಸಿದ್ದಾರೆ.