ನಮಸ್ತೆ ಎಂದು ಭಾಷಣ ಪ್ರಾರಂಭಿಸಿ, ಯುಎಸ್​ನಲ್ಲಿ ತಾವು ನಡೆಸುತ್ತಿರುವ ಬಿ ಬೆಸ್ಟ್​ ಅಭಿಯಾನದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸಿದ ಮೆಲಾನಿಯಾ ಟ್ರಂಪ್​

Melania 25 Feb 20
Published on

ನವದೆಹಲಿ: ನಾನಕ್​ಪುರ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಲೆತು, ಸಂವಾದ ನಡೆಸಿದ ಬಳಿಕ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಅವರು ವೇದಿಕೆ ಮೇಲೆ ಮಾತನಾಡಿದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮಾತನಾಡಿದ ಅವರು ನಮಸ್ತೆ ಎಂದು ಭಾಷಣ ಪ್ರಾರಂಭಿಸಿದರು. ಇದು ಅತ್ಯಂತ ಸುಂದರವಾದ ಶಾಲೆ. ನೃತ್ಯಪ್ರದರ್ಶನದಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ನನ್ನನ್ನು ಈ ಶಾಲೆಗೆ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಇಲ್ಲಿನ ಜನರು ಆದರಣೀಯವಾಗಿ ಮತ್ತು ಆತ್ಮೀಯವಾಗಿ ನಮ್ಮನ್ನು ಬರಮಾಡಿಕೊಂಡಿದ್ದಾರೆ ಎಂದರು.

ಅಮೆರಿಕದಲ್ಲಿ ನಾನು ಬಿ ಬೆಸ್ಟ್​ (BE BEST) ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದೇನೆ. ಈ ಮೂಲಕ ನಿಮ್ಮಂತಹ ಮಕ್ಕಳೊಂದಿಗೆ ಮಾತನಾಡುತ್ತೇನೆ. ಅವರೊಂದಿಗೆ ಸಂವಾದ ನಡೆಸುತ್ತೇನೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಸೇವನೆಯ ಅಪಾಯವನ್ನು ತಿಳಿಸುವುದು, ಅಂತರ್ಜಾಲ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಈ ಬಿ ಬೆಸ್ಟ್​ನ ಮುಖ್ಯ ಉದ್ದೇಶ. ಒಟ್ಟಾರೆ ಮಕ್ಕಳ ಯೋಗಕ್ಷೇಮವನ್ನೇ ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೆಲಾನಿಯಾ ಟ್ರಂಪ್​ ಅವರಿಗೆ ಮಕ್ಕಳು ತಾವೇ ಮಾಡಿದ ಪೇಂಟಿಂಗ್​ಗಳನ್ನು ಉಡುಗೊರೆಯನ್ನಾಗಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net