ಚಾಲೆಂಜ್ ಮಾಡಿ ಹೇಳುತ್ತಿದ್ದೇನೆ… ಡಿಕೆಶಿ ಮತ್ತು ಕುಮಾರಸ್ವಾಮಿ ನಿರುದ್ಯೋಗಿಗಳಾಗುವುದು ಖಚಿತ; ನಳಿನ್ ಕುಮಾರ್ ಕಟೀಲ್

Nalin Kumar Kateel
Published on

ರಾಮನಗರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ದೇಶ ಕಾಂಗ್ರೆಸ್ ಮುಕ್ತವಾಗುತ್ತಿದ್ದು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಿರುದ್ಯೋಗಿ ಆಗುವುದು ಖಚಿತ ಎಂದು ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣದಲ್ಲಿ ಜೆಡಿಎಸ್ ದೂಳಿಪಟ್ಟ ಆಗಿದ್ದು, ಮಾಗಡಿಯಲ್ಲಿ ಜೆಡಿಎಸ್ ಅರಬ್ಬೀ ಸಮುದ್ರ ಸೇರುತ್ತದೆ‌. ರಾಮನಗರ, ಮಾಗಡಿ, ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿ ಧ್ವಜ ಹಾರುವುದು ನಿಶ್ಚಿತ. ಹಿಂದೆ ಇಂದಿರಾಗಾಂಧಿ ಕಾಲಘಟ್ಟದಲ್ಲಿ, ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈಗ ಇಂದಿರಾ ಗಾಂಧಿ ಕಾಂಗ್ರೆಸ್ ಇಲ್ಲ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಇದ್ದು, ಪರಿವರ್ತನ ಆಗುತ್ತಿದೆ ಎಂದರು.

ಜಗತ್ತಿನ ಯಾವ ದೇಶಗಳಲ್ಲೂ ಕರೊನ ಲಸಿಕೆ ಇಲ್ಲದಾಗ, ವಿಜ್ಞಾನಿಗಳ ಮೂಲಕ ಹೊರದೇಶಕ್ಕೂ ಭಾರತ ಲಸಿಕೆ ಕೊಟ್ಟಿದೆ. ಪ್ರಧಾನಿ ಮೋದಿ ಲಸಿಕೆಯನ್ನು ಮೊದಲು ತೆಗೆದುಕೊಳ್ಳಲಿಲ್ಲ. ಬದಲಾಗಿ ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ಕೊಡುತ್ತಾ ಬಂದರು. ಒಂದು ವೇಳೆ ಅಧಿಕಾರದಲ್ಲಿ ಮನಮೋಹನ್ ಸಿಂಗ್ ಇದ್ದಿದ್ದರೆ ಮೊದಲ ಲಸಿಕೆಯನ್ನು ಸೋನಿಯಾ ಗಾಂಧಿಗೆ, ಎರಡನೆ ಲಸಿಕೆ ಪ್ರಿಯಾಂಕ ಗಾಂಧಿಗೆ, ಬಳಿಕ ರಾಹುಲ್ ಗಾಂಧಿಗೆ, ನಂತರ ರಾಬರ್ಟ್ ವಾದ್ರಾಗೆ ನೀಡುತ್ತಿದ್ದರು. ಕೊನೆಗೆ ಉಳಿದರೆ ಮನಮೋಹನ್ ಸಿಂಗ್ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಕೊಡುತ್ತಿದ್ದರು. ಆದರೆ ಮೋದಿ ಮಾತ್ರ ಎಲ್ಲರಿಗೂ ಉಚಿತ ಲಸಿಕೆ ನೀಡಿದರು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net