

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಮಕ್ಕಳಿಗಾಗಿ ‘ನಲಿ-ಕಲಿ’
ಕರೊನಾ ಕಾರಣಕ್ಕಾಗಿ ಶಾಲೆಗಳಿಗೆ ರಜೆ ನೀಡಿದಾಗ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯಬಾರದೆಂಬ ಕಾರಣಕ್ಕೆ ಪಾಲಕರ ವಾಟ್ಸ್ಆಪ್ ನಂಬರ್ ಸಂಗ್ರಹಿಸಿ ನಮ್ಮ ಶಾಲೆಯ ಹೆಸರಿನಲ್ಲಿ ‘ನಲಿ-ಕಲಿ’ ಗ್ರೂಪ್ ಮಾಡಿ ಮಕ್ಕಳಿಗೆ ಪ್ರತಿದಿನ ಕಲಿಕಾ ಚಟುವಟಿಕೆ ನೀಡುತ್ತಿದ್ದೆ. ಮಕ್ಕಳೂ ಉತ್ಸಾಹದಿಂದ ಅಭ್ಯಾಸ ಮಾಡಿದ್ದನ್ನು ಗ್ರೂಪ್ಗೆ ಹಾಕುವುದು, ನಾನು ಮರಳಿ ಸರಿ-ತಪ್ಪು ತಿಳಿಸಿ ಇಮೋಜಿಗಳ ಮೂಲಕ ಪೋ›ತ್ಸಾಹಿಸುವುದು ಮುಂದುವರಿಯಿತು. ಒಂದು ಯೂಟ್ಯೂಬ್ ಚಾನೆಲ್ ಮಾಡಿ ಆ ಮೂಲಕ ಪಾಠಗಳ ವಿಡಿಯೋ ಮಾಡಿ ಕಳಿಸಿದ್ದು ನಮ್ಮ ಶಾಲೆಯ ಮಕ್ಕಳಿಗಲ್ಲದೆ ಬೇರೆ ಮಕ್ಕಳಿಗೂ ಹಾಗೂ ಉಳಿದ ಶಿಕ್ಷಕರಿಗೂ ಸಹಾಯವಾಯಿತು. ಬಹಳಷ್ಟು ಶಿಕ್ಷಕರು ಹಾಗೂ ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೋ›ತ್ಸಾಹ ನೀಡಿದರು.
| ವಿಜಯಲಕ್ಷ್ಮೀ ವಿ. ಅಕ್ಕಿ ಮಾಗಡಿ, ಶಿರಹಟ್ಟಿ