ನಾಗೇಂದ್ರ ಮಾಸ್ಟರ್​ ವೆುೖಂಡ್!: ವಾಲ್ಮೀಕಿ ಹಗರಣ ಇಡಿ ಚಾರ್ಜ್​ಶೀಟ್ | ಮಾಜಿ ಸಚಿವರೇ ಎ1

result
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) 5114 ಪುಟಗಳ ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದೆ. ಮಾಜಿ ಸಚಿವ ನಾಗೇಂದ್ರ ಅವರೇ ಪ್ರಕರಣದ ಪ್ರಮುಖ ಆರೋಪಿ (ಎ1) ಎಂದು ಇ.ಡಿ. ಹೆಸರಿಸಿದ್ದು, ನಿಗಮದಿಂದ ಲೂಟಿ ಹೊಡೆಯಲಾದ ಹಣ ದಲ್ಲಿ 20.19 ಕೋಟಿ ರೂ.ಗಳನ್ನು ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಗೆ ಬಳಸಿ ಕೊಂಡಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಿದೆ.

ವಿಶೇಷವೆಂದರೆ, ಇದೇ ಪ್ರಕರಣದಲ್ಲಿ ಸಿಐಡಿಯ ಎಸ್​ಐಟಿ ತಂಡ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ ನಾಗೇಂದ್ರ ಹೆಸರು ಉಲ್ಲೇಖವಾಗಿರಲಿಲ್ಲ. ನಿಗಮದ 89.62 ಕೋಟಿ ರೂ. ಹಗರಣ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಲೇವಾದೇವಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಇ.ಡಿ.ಆರೋಪಪಟ್ಟಿಯಲ್ಲಿ 25 ಆರೋಪಿಗಳ ವಿರುದ್ಧ ದೋಷಾರೋಪ ಸಲ್ಲಿಸಿದೆ.

25 ಜನರಿಗೆ ಸಂಕಷ್ಟ: ವಾಲ್ಮೀಕಿ ಹಗರಣದಲ್ಲಿ ಬಿ.ನಾಗೇಂದ್ರ ಎ1 ಆಗಿದ್ದರೆ, ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ವ ಎ2, ತೆಲಂಗಾಣದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ-ಎ3, ನಿಗಮದ ಮಾಜಿ ವ್ಯವಸ್ಥಾಪಕ ಜೆ.ಜಿ. ಪದ್ಮನಾಭ್-ಎ4, ಮಾಜಿ ಲೆಕ್ಕಾಧಿಕ್ಷಕ ಪರಶುರಾಮ ದುರ್ಗಣ್ಣನವರ್-ಎ5 ಆಗಿದ್ದು, ನಾಗೇಂದ್ರ ಅವರ ಆಪ್ತ ನೆಕ್ಕುಂಟೆ ನಾಗರಾಜ್, ಈತನ ಭಾವಮೈದುನ ನಾಗೇಶ್ವರ ರಾವ್, ಹೈದರಾಬಾದ್ ಮೂಲದ ಎಂ.ಚಂದ್ರಮೋಹನ್, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶ ಮೂಲದ ಪಿಟ್ಟಲ ಶ್ರೀನಿವಾಸ, ಹೈದರಾಬಾದ್ ಮೂಲದ ಸಾಯಿತೇಜ ಮತ್ತು ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ ರಾವ್ ಹಾಗೂ ಬ್ಯಾಂಕ್ ಅಧಿಕಾರಿಗಳು ಸೇರಿ 25 ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಹೋಟೆಲ್​ನಲ್ಲಿ ಡೀಲ್ : ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ನಾಗೇಂದ್ರ, ಬಳ್ಳಾರಿ ಲೋಕಸಭಾ ಚುನಾವಣೆ ಉಸ್ತುವಾರಿ ವಹಿಸಬೇಕಿತ್ತು. ಆದ್ದರಿಂದ ಸರ್ಕಾರದ ಖಜಾನೆ-2 ರಿಂದ 187 ಕೋಟಿ ರೂ. ಗಳನ್ನು ನಿಗಮದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದರು. ನಂತರ ಡಿಸೆಂಬರ್ ಕೊನೆಯ ವಾರ ಶಾಂಘ್ರಿಲಾ ಹೋಟೆಲ್​ನಲ್ಲಿ ನಾಗೇಂದ್ರ ತನ್ನ ಸಂಬಂಧಿ ನೆಕ್ಕುಂಟೆ ನಾಗರಾಜ್, ನಾಗೇಶ್ವರ ರಾವ್, ದೇವೇಂದ್ರಪ್ಪ ಮತ್ತು ಹೈದರಾಬಾದ್​ನ ಸತ್ಯನಾರಾಯಣ ವರ್ವ ಜತೆ ರಹಸ್ಯ ಸಭೆ ನಡೆಸಿದ್ದರು. ಸಭೆಗೆ ನಿಗಮದ ಎಂ.ಡಿ. ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ನ್ನು ಕರೆಸಿ ಪ್ರತ್ಯೇಕವಾಗಿ ಕೂರಿಸಿದ್ದರು. ಬಿ. ನಾಗೇಂದ್ರನನ್ನು ಹೊರತುಪಡಿಸಿ ನೆಕ್ಕುಂಟೆ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂ.ಡಿ. ಪದ್ಮನಾಭ್ ಬಳಿಗೆ ಹೋಗಿ ಸತ್ಯನಾರಾಯಣ ವರ್ವನನ್ನು ತೋರಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯ ಮಾಡಿಸಿದ್ದರು. ನಿಗಮದ ಹೆಸರಿನಲ್ಲಿ ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಅಲ್ಲಿಗೆ ಹಣ ವರ್ಗಾವಣೆ ಮಾಡುವಂತೆ ಪದ್ಮನಾಭ್​ಗೆ ನೆಕ್ಕುಂಟೆ ನಾಗರಾಜ್ ಸೂಚನೆ ಕೊಟ್ಟಿದ್ದ. ಅದು ಸಾಧ್ಯವಾಗುವುದಿಲ್ಲ ಎಂದು ಪದ್ಮನಾಭ್ ವಿರೋಧ ವ್ಯಕ್ತಪಡಿಸಿದಾಗ ಕೆರಳಿದ ನೆಕ್ಕುಂಟೆ ನಾಗರಾಜ್ ‘ಮಿನಿಸ್ಟರ್ ಹೇಳಿದ್ದಾರೆ. ನಿಮ್ಮದು ಏನು ಕಥೆ? ಮಿನಿಸ್ಟರ್ ಇಲ್ಲೇ ಇದ್ದಾರೆ ಹೇಳಿಸುತ್ತೇನೆ ಇರಿ’ ಎಂದು ಅವಾಜ್ ಹಾಕಿದ್ದ. ಪಕ್ಕದ ರೂಮ್ಲ್ಲಿದ್ದ ಬಿ. ನಾಗೇಂದ್ರಗೆ ವಿಷಯ ತಿಳಿಸಿದಾಗ ಅಲ್ಲಿಗೆ ಹೋಗೋಣ ಬನ್ನಿ ಎಂದು ನಾಗೇಂದ್ರ ಅವರೇ ನಿಗಮದ ಅಧಿಕಾರಿಗಳ ಬಳಿ ಹೋಗಿದ್ದರು. ನೆಕ್ಕುಂಟೆ ನಾಗರಾಜ್ ಹೇಳಿದಂತೆ ಎಂ.ಜಿ. ರಸ್ತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹೊಸ ಬ್ಯಾಂಕ್ ಖಾತೆ ತೆರೆದು 187 ಕೋಟಿ ರೂ. ವರ್ಗಾವಣೆ ಮಾಡಿ, ಬಳಿಕ ಏನು ಮಾಡಬೇಕೆಂದು ಹೇಳುತ್ತಾರೆ ಎಂದು ಪದ್ಮನಾಭ್​ಗೆ ನಾಗೇಂದ್ರ ಸೂಚನೆ ಕೊಟ್ಟಿದ್ದರು. ಸಚಿವರ ವಿಶ್ವಾಸ ಗಳಿಸುವ ಉದ್ದೇಶಕ್ಕೆ ಅವರು ಹೇಳಿದಂತೆ ಪದ್ಮನಾಭ್ ಮಾಡಿದ್ದರು ಎಂದು ಇಡಿ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ.

18 ಖಾತೆ, 95.02 ಕೋಟಿ ವರ್ಗ: ನಿಗಮದ ಉಳಿತಾಯ ಖಾತೆಯಿಂದ ಹೈದರಾಬಾದ್​ನ 9 ನಕಲಿ ಖಾತೆಗಳಿಗೆ 45.02 ಕೋಟಿ ರೂ. ವರ್ಗಾವಣೆಯಾಗಿದೆ. ನಂತರ ನಿಗಮದ ಸೆಕ್ಯೂರ್ಡ್ ಓವರ್​ಡ್ರಾಫ್ಟ್ ಖಾತೆಯಿಂದ ಇನ್ನೂ 9 ನಕಲಿ ಖಾತೆಗಳಿಗೆ 50 ಕೋಟಿ ರೂ. ವರ್ಗಾವಣೆಯಾಗಿತ್ತು. 2 ಬ್ಯಾಂಕ್ ಖಾತೆಗಳಿಂದ ಹೈದರಾಬಾದ್​ನ ಬಂಜಾರ ಹಿಲ್ಸ್​ನ ಆರ್​ಬಿಎಲ್ ಬ್ಯಾಂಕ್​ನ 18 ನಕಲಿ ಖಾತೆಗಳಿಗೆ 95.02 ಕೋಟಿ ರೂ. ವರ್ಗಾವಣೆಯಾಗಿತ್ತು. ಕೇಸ್ ಬೆಳಕಿಗೆ ಬಂದ ಕೂಡಲೇ 5 ಕೋಟಿ ರೂ. ವಾಪಸ್ ಆಗಿತ್ತು. ಉಳಿದ 89.62 ಕೋಟಿ ರೂ. ದುರ್ಬಳಕೆ ಆಗಿದೆ.

ಹಣ ಹಂಚಿಕೆಗೆ ಸಾಕ್ಷ್ಯ : ನಾಗೇಂದ್ರ ವಾಲ್ಮೀಕಿ ನಿಗಮಕ್ಕೆ ಪದ್ಮನಾಭ ಅವರನ್ನು ಎಂಡಿಯಾಗಿ ನೇಮಕ ಮಾಡಿ ಹಣ ಲಪಟಾಯಿಸಲು ಸ್ಕೆಚ್ ಹಾಕಿದ್ದರು. ನಾಗೇಂದ್ರ ಆಪ್ತ ಸಹಾಯಕ, 8ನೇ ಆರೋಪಿ ವಿಜಯ್ ಕುಮಾರ್ ಮೊಬೈಲ್​ನಲ್ಲಿ ಹಣದ ಬಂಡಲ್ ಫೋಟೋಗಳ ಜತೆಗೆ ಎಲ್ಲೆಲ್ಲಿಗೆ ನಗದು ಪೂರೈಸಬೇಕೆಂದು ಉಲ್ಲೇಖಿಸಿದ್ದ ಚೀಟಿಯ ಚಿತ್ರಗಳು ಪತ್ತೆಯಾಗಿವೆ. 20.19 ಕೋಟಿ ರೂ.ಗಳನ್ನು ಪ್ರತಿ ಬೂತ್​ಗೂ ಹಂಚಿರುವುದಕ್ಕೆ ಸಾಕ್ಷ್ಯ ಸಿಕ್ಕಿವೆ. ಸ್ವತಃ ಬಿ. ನಾಗೇಂದ್ರ ಅವರೇ 5.26 ಕೋಟಿ ರೂ. ಬಳಸಿರುವುದನ್ನು 15 ಸಾಕ್ಷಿಗಳಿಂದ ದೃಢಪಡಿಸಿಕೊಳ್ಳಲಾಗಿದೆ. ಆರ್ಥಿಕ ಇಲಾಖೆ ಅಧಿಕಾರಿಗಳು ಸಣ್ಣ ಕೆಲಸದ ಬಿಲ್​ಗಳಿಗೆ ನಿಯಮ ಉಲ್ಲಂಘಿಸಿ ದೊಡ್ಡ ಮೊತ್ತದ ಹಣ ವರ್ಗಾಯಿಸಿದ್ದಾರೆ. ಶಾಸಕ ಬಸನಗೌಡ ದದ್ದಲ್ ಮೇಲಿನ ಆರೋಪ ಕುರಿತು ತನಿಖೆ ಮುಂದುವರಿದಿರುವುದಾಗಿ ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗದು ಡ್ರಾ ಹೇಗಾಯ್ತು?: ಹೈದರಾಬಾದ್​ನ ಆರ್​ಬಿಎಲ್ ಬ್ಯಾಂಕ್ ಹಾಗೂ ಫಸ್ಟ್ ಫೈನಾನ್ಸ್ ಕ್ರೆಡಿಟ್ ಬ್ಯಾಂಕ್​ನಲ್ಲಿ 20 ನಕಲಿ ಖಾತೆಗಳನ್ನು ತೆರೆಯಲಾಗಿತ್ತು. ಈ ಪೈಕಿ 13 ನಕಲಿ ಖಾತೆಗಳಿಗೆ 55.76 ಕೋಟಿ ರೂ., 7 ಆಂತರಿಕ ಖಾತೆಗಳಿಗೆ 41.63 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಹೈದರಾಬಾದ್ ಮೂಲದ 2 ಆಭರಣ ಮಳಿಗೆ, 11 ಕಂಪನಿಗಳಿಗೆ 95 ಕೋಟಿ ರೂ. ವರ್ಗಾವಣೆ ಆಗಿತ್ತು. ನಂತರ 193 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ನಗದು ಮಾಡಿಕೊಂಡು ಹವಾಲ ಮೂಲಕ ವರ್ಗಾವಣೆ ಮಾಡಿ ಲೋಕಸಭಾ ಚುನಾವಣೆಗೆ ಅಂದಾಜು 20.19 ಕೋಟಿ ರೂ. ಬಳಕೆ ಮಾಡಿದ್ದಾರೆಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಚಾರ್ಜ್​ಶೀಟ್​ನಲ್ಲೇನಿದೆ?

* ಎಂಡಿ ನೇಮಕ ವೇಳೆಯೇ ಹಗರಣಕ್ಕೆ ಸಂಚು

* ಲೋಕ ಚುನಾವಣೆಯ ಮುನ್ನವೇ ಹಗರಣ

* ಮೂರ್ನಾಲ್ಕು ತಿಂಗಳ ಮೊದಲೇ ಲೂಟಿ

* ಬಿ.ನಾಗೇಂದ್ರ ಲೂಟಿಗೆ ಪ್ಲಾ್ಯನ್ ಮಾಡಿದ್ರು

* ಪ.ವರ್ಗ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ

* ಡಿಸೆಂಬರ್ ಕೊನೇ ವಾರ ನಡೆದಿತ್ತು ಸಭೆ

* ಶಾಂಘ್ರಿಲಾ ಹೋಟೆಲಲ್ಲಿ ರಹಸ್ಯ ಮೀಟಿಂಗ್

* ನಕಲಿ ಖಾತೆ ತೆರೆಯುವ ಕುರಿತು ಮಾತುಕತೆ

* ಹೋಟೆಲ್ ಸಿಸಿ ಕ್ಯಾಮರಾದ ದ್ಯಶ್ಯಗಳು ಲಭ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net