

ಹುಬ್ಬಳ್ಳಿ: ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಹೇಳಲಾಗುತ್ತಿದ್ದು, ಕೊನೆಗೂ ಅದು ನಿಜವಾಗಿದೆ. ಪಕ್ಷ ತಮಗೆ ಕೈಕೊಟ್ಟಿದ್ದಕ್ಕಾಗಿ ಇಂದು ಅವರು 'ಕೈ' ಬಿಟ್ಟಿದ್ದಾರೆ.
ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಛಬ್ಬಿಗೆ ಪಕ್ಷ ಟಿಕೆಟ್ ಕೊಡದೆ ಸಂತೋಷ್ ಲಾಡ್ಗೆ ಕೊಟ್ಟಿದ್ದರಿಂದ ಅವರು ಆಕ್ರೋಶಗೊಂಡಿದ್ದರು. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ ಅವರು ಇಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಡೆದ ಬೆಳವಣಿಗೆಯಿಂದ ಮನನೊಂದು ರಾಜೀನಾಮೆ ಕೊಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿರುವ ಅವರು, ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೆ ರವಾನೆ ಮಾಡಿದ್ದಾರೆ. ಶೀಘ್ರದಲ್ಲೇ ಬೇರೆ ಪಕ್ಷಕ್ಕೆ ಸೇರಿ ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿ ಅವರಿದ್ದಾರೆ ಎನ್ನಲಾಗಿದೆ.