

ಶಿವಮೊಗ್ಗ: ಜಿಲ್ಲಾದ್ಯಂತ ಶುಕ್ರವಾರ ನಾಗರ ಪಂಚಮಿಯನ್ನು ಜನರು ಸಂಭ್ರಮ, ಸಡಗರದಿಂದ ಆಚರಿಸಿದರು. ನಾಗದೇವರ ದೇವಸ್ಥಾನಗಳು ಮಾತ್ರವಲ್ಲದೆ ಅರಳೀಕಟ್ಟೆ, ಹುತ್ತಗಳಿಗೂ ಶ್ರದ್ಧಾಭಕ್ತಿಯಿಂದ ಹಾಲೆರೆದರು.
ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳ ಆವರಣದಲ್ಲಿದ್ದ ನಾಗರ ಕಲ್ಲಿಗೆ ಮಹಿಳೆಯರು ಶುಕ್ರವಾರ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಶಿವಮೊಗ್ಗ ಗೋಪಾಲ ಗೌಡ ಬಡಾವಣೆಯ ನಾಗಲಿಂಗೇಶ್ವರ, ನಾಗಸುಬ್ರಹ್ಮಣ್ಯ ದೇವಸ್ಥಾನ, ಕೋಟೆ ರಸ್ತೆ ಭೀಮೇಶ್ವರ ದೇವಸ್ಥಾನ, ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಮಹಿಳೆಯರು ಮತ್ತು ಕುಟುಂಬ ಸದಸ್ಯರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿಷೇಕ ಮಾಡಿದರು.
ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ನಾಗರಕ್ಕೂ ಹಾಲೆರೆದರು. ಇನ್ನೂ ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ನಮಿಸಿದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಮನೆಗಳಲ್ಲೇ ನಾಗರ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಕೆಲವೆಡೆ ಗುರುವಾರ ನಾಗ ಚೌತಿ ಆಚರಿಸಿದ್ದರು.
ಶ್ರಾವಣ ಮಾಸದ ಪ್ರಥಮ ಹಬ್ಬ ಇದಾಗಿದ್ದು, ನಾಗರ ಪಂಚಮಿಯೊಂದಿಗೆ ವಿವಿಧ ಹಬ್ಬಗಳಿಗೂ ಚಾಲನೆ ದೊರೆಯುತ್ತದೆ. ನಾಗರಪಂಚಮಿ ನಂತರ ವರಮಹಾಲಕ್ಷ್ಮೀ, ರಕ್ಷಾ ಬಂಧನ, ಗೌರಿ-ಗಣೇಶ ಹಬ್ಬಗಳು ಬೆನ್ನ ಹಿಂದೆಯೇ ಬರಲಿದೆ. ನಾಗಚೌತಿಯ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆಂಬ ಭಾವನೆ ಜನರಲ್ಲಿದೆ.