

ಶಿಕಾರಿಪುರ: ಒಂದು ದಶಕದಿಂದ ಈಚೆಗೆ ವರ್ಷದಿಂದ ವರ್ಷಕ್ಕೆ ನಬಾರ್ಡ್ ಪುನರ್ ಧನದ ಮೊತ್ತವನ್ನು ಕಡಿಮೆ ಮಾಡುತ್ತಿರುವುದು ಕೃಷಿ ವಲಯಕ್ಕೆ ಹಿನ್ನಡೆಯಾಗುವುದು ನಿಶ್ಚಿತ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ.ಚಂದ್ರಶೇಖರ ಗೌಡ ಹೇಳಿದರು.
ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತ ಸಹಕಾರ ಬ್ಯಾಂಕ್‌ಗಳು ಜನಸ್ನೇಹಿಯಾಗಿವೆ. ರೈತರ ಹಿತ ಕಾಯುವುದೇ ನಮ್ಮ ಧ್ಯೇಯ, ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ ಹಣ ಬರುತ್ತದೆ. ಅಪೆಕ್ಸ್ ಬ್ಯಾಂಕ್‌ನಿಂದ ಡಿಸಿಸಿ ಬ್ಯಾಂಕ್‌ಗೆ ಹಣ ಬರುತ್ತದೆ. ನಾವು ಎಲ್ಲ ಸೇವಾ ಸಹಕಾರ ಸಂಘಗಳ ರೈತರ ಬೆಳೆಸಾಲಕ್ಕೆ ಹಣ ನೀಡುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ 750 ಕೋಟಿ ರೂ. ಸಾಲ ಬೇಡಿಕೆಗೆ 113 ಕೋಟಿ ರೂ.ಗಳನ್ನು ನಬಾರ್ಡ್ ನೀಡಿದೆ. ಇದರಿಂದ ರೈತರ ಬೇಡಿಕೆಯಷ್ಟು ಸಾಲ ನೀಡಲು ಆಗುತ್ತಿಲ್ಲ. ಕೃಷಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಕಳೆದ ವರ್ಷದವರೆಗೆ 13,896 ರೈತರಿಗೆ ಬೆಳೆಸಾಲ ನೀಡಲಾಗಿದೆ. ಪ್ರಸಕ್ತ ವರ್ಷ 28 ಕೋಟಿ ರೂ. ಬೆಳೆಸಾಲ ನೀಡಿದ್ದೇವೆ. ತಾಲೂಕಿನ ಸುಣ್ಣದಕೊಪ್ಪದಲ್ಲಿ ಶೀಘ್ರವೇ ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳು ಎ್ಡಿ ಮತ್ತು ಷೇರುಗಳಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ಸಹಕಾರ ಸಂಘಗಳು ಕನಿಷ್ಠ ಶೇ.30 ರೈತರಿಗೆ ಬೆಳೆ ಸಾಲ ನೀಡಬೇಕು ಎಂದು ನಬಾರ್ಡ್ ನಿರ್ದೇಶಿಸಿದೆ. ನಮ್ಮ ಸಹಕಾರ ಸಂಘಗಳು ಈ ದಿಸೆಯಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ನಬಾರ್ಡ್‌ನಿಂದ ದೊರೆಯುವ ಅನುಕೂಲಗಳು ಸಹಕಾರ ಸಂಘಗಳಿಗೆ ದೊರೆಯುವುದಿಲ್ಲ ಎಂದು ತಿಳಿಸಿದರು.
ಪ್ರಮುಖರಾದ ಎಚ್.ಎಸ್.ರವೀಂದ್ರ, ಹುಚ್ಚರಾಯಪ್ಪ, ರಮೇಶ್, ಸತೀಶ್, ಅರುಣ್‌ಕುಮಾರ್, ಸುದರ್ಶನ್ ನಾಯ್ಡು ಇದ್ದರು.