ಒಬ್ಬರಿಗೆ ನಿದ್ದೆ ಖಾಯಿಲೆ; ಇನ್ನೊಬ್ಬರಿಗೆ ಮರೆವಿನ ಖಾಯಿಲೆ …

Naanu Adu Mattu Saroja
Published on

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಯೋಗಿ ಪ್ರತಿ ಚಿತ್ರದಲ್ಲೂ ಒಂದೊಂದು ಹೊಸ ಪ್ರಯೋಗವನ್ನು ಮಾಡುತ್ತಾ ಬಂದಿದ್ದಾರೆ. ಅದು ಅವರ ಮುಂದಿನ ಚಿತ್ರದಲ್ಲೂ ಮುಂದುವರೆದಿದ್ದು, ಈ ಬಾರಿ ಅವರು ಹೈಪರ್​ ಇನ್​ಸಾಮ್ನಿಯಾ ಎಂಬ ಖಾಯಿಲೆಯಿಂದ ಬಳಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಚಿತ್ರದ ಹೆಸರು 'ನಾನು, ಅದು ಮತ್ತು ಸರೋಜ'.

'ನಾನು, ಅದು ಮತ್ತು ಸರೋಜ' ಚಿತ್ರವು ಇದೇ ಡಿ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಮೂರು ಪ್ರಮುಖ ಪಾತ್ರಗಳ ಸುತ್ತ ಸುತ್ತುವ ಈ ಚಿತ್ರವನ್ನು ವಿನಯ್​ ಪ್ರೀತಮ್​ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಮಡಮಕ್ಕಿ' ಎಂಬ ಚಿತ್ರ ನಿರ್ದೇಶಿಸದ್ದ ಅವರಿಗೆ ಇದು ಎರಡನೇ ಚಿತ್ರ. ಇನ್ನು, ಪೂಜಾ ವಸಂತಕುಮಾರ್​ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಯೋಗಿ, 'ನನಗೆ ನಿರ್ದೇಶಕ ವಿನಯ್ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ತಮಿಳಿನಲ್ಲಿ ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆಯಿತ್ತು. ಆ ಆಸೆ ಈ ಚಿತ್ರದಲ್ಲಿ ಈಡೇರಿತು' ಎನ್ನುತ್ತಾರೆ ಯೋಗಿ.

ನಾಯಕಿ ಅಪೂರ್ವ ಭಾರದ್ವಾಜ್​, ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. 'ಸಾಮಾನ್ಯವಾಗಿ ಬೇರೆ ನಟಿಯರು‌ ಈ ಪಾತ್ರ ಮಾಡಲು ಮುಜುಗರ ಪಡುತ್ತಾರೆ. ನನಗೂ ಮೊದಲು ಸ್ವಲ್ಪ ಮುಜಗರವಾಯಿತು. ಆದರೆ, ಪಾತ್ರವನ್ನು ಪಾತ್ರ ಎಂದು ತಿಳಿದು ನಟಿಸಿದೆ. ಚಿತ್ರ ಚೆನ್ನಾಗಿ ಬಂದಿದೆ' ಎನ್ನುತ್ತಾರೆ ಅಪೂರ್ವ

'ನಾನು, ಅದು ಮತ್ತು ಸರೋಜ' ಚಿತ್ರದಲ್ಲಿ ದತ್ತಣ್ಣ, ಸಂದೀಪ್​, 'ಕುರಿ ಬಾಂಡ್​' ರಂಗ ಮುಂತಾದವರು ನಟಿಸಿದ್ದಾರೆ. ಪ್ರಸಾದ್​ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net