ಬೆಂಗಳೂರು: ನಾನೂರು ವರ್ಷಗಳಿಗೂ ಮೀರಿದ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ ಹೊಂದಿರುವ ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಜಗತ್ಪ್ರಸಿದ್ಧ ಆಚರಣೆ ಎಂಬ ವರ್ಚಸ್ಸು ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಪ್ರತಿ ಜಿಲ್ಲೆಯಲ್ಲೂ ಮೈಸೂರು ಮಾದರಿ ದಸರಾ ಆಚರಣೆ ಶುರುವಾಗಿರುವ ಪರಿಣಾಮ ನಾಡಹಬ್ಬದ ಮಹತ್ವವೇ ಕಡಿಮೆಯಾಗುತ್ತಿರುವ ಭಾವನೆಗೆ ಆಸ್ಪದ ಕೊಟ್ಟಂತಾಗಿದೆ.
ಜಿಲ್ಲಾ ಕೇಂದ್ರಗಳಲ್ಲಿ ದಸರಾ ಆಚರಣೆಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಹಣ ಬಿಡುಗಡೆ ಮಾಡಿಸಿ ದುಂದು ವೆಚ್ಚ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮುನ್ನೆಚ್ಚರಿಕೆ ಕ್ರಮಗಳ ವಿಚಾರದಲ್ಲಿ ಜಿಲ್ಲಾಡಳಿತ ವಿಲವಾಗುತ್ತಿವೆ. ಪ್ರತಿ ಜಿಲ್ಲೆಯಲ್ಲೂ ಭದ್ರತೆ ಕೊಡುವ ಜತೆಗೆ ಇಡೀ ಅಧಿಕಾರಿ ವರ್ಗ ತೊಡಗಿಸಿಕೊಳ್ಳುವುದರಿಂದ ಮೈಸೂರು ದಸರಾ ಹಬ್ಬಕ್ಕೆ ಕೊಡಬೇಕಾಗಿದ್ದ ಪ್ರಾಶಸ್ತ್ಯ ಕಡಿಮೆಯಾಗುತ್ತಿದೆ.
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನಿಟ್ಟು ಅರಮನೆಯಿಂದ ಬನ್ನಿಮಂಟಪದವರೆಗಿನ ಜಂಬೂಸವಾರಿ ಮೆರವಣಿಗೆ ನೋಡಲು ರಾಜ್ಯವಷ್ಟೇ ಅಲ್ಲ, ದೇಶ, ವಿದೇಶದಿಂದ ಜನರು ಆಗಮಿಸುತ್ತಾರೆ. ಮೈಸೂರು ಅರಮನೆ, ನಗರದ ಪ್ರಮುಖ ಬೀದಿಗಳಲ್ಲಿ ಲಕ್ಷಾಂತರ ವಿದ್ಯುತ್ ದೀಪಗಳಿಂದ ಅಲಂಕಾರ, ದಸರಾ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪಂಜಿನ ಕವಾಯತು ನೋಡಲು ಜನಸಾಗರ ಸೇರುತ್ತದೆ. ಮೈಸೂರು ದಸರಾ ನೋಡಲು ಬರುವ ಲಕ್ಷಾಂತರ ಜನರಿಗೆ ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿರುತ್ತದೆ. ಆದರಿಂದ ಅಕ್ಕಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಮತ್ತು ಅಧಿಕಾರಿ ವರ್ಗವನ್ನು ನಿಯೋಜನೆ ಮಾಡುತ್ತಾರೆ. ಆದರೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ದಸರಾ ಆಚರಣೆಗೆ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಮೈಸೂರು ದಸರಾಗೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ಸಾಧ್ಯವಾಗದೆ ಇದ್ದವರ ಕೈಯಲ್ಲಿಯೇ ಡಬಲ್ ಡ್ಯೂಟಿ ಮಾಡಿಸುವ ಪರಿಸ್ಥಿತಿ ಎದುರಾಗಿದೆ.
ಎಲ್ಲೆಲ್ಲಿ ದಸರಾ ಆಚರಣೆ : ಶಿವಮೊಗ್ಗ, ತುಮಕೂರು, ಚಾಮರಾಜನಗರ, ಮಡಿಕೇರಿ, ವಿಜಯನಗರ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೈಸೂರು ಮಾದರಿಯಲ್ಲಿ ದಸರಾ ಆಚರಣೆ ನಡೆಸಲಾಗುತ್ತಿದೆ.
ಮತ್ತೊಂದೆಡೆ ಸಚಿವರು ಮತ್ತು ಶಾಸಕರು ಪ್ರಭಾವ ಬಳಸಿಕೊಂಡು ಅಂಬಾರಿ ಹೊರಲು ಆನೆಗಳನ್ನು ಕಳುಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಏರುತ್ತಾರೆ. ಮಾರ್ಗಸೂಚಿ ಪ್ರಕಾರ ತರಬೇತಿ ಇಲ್ಲದೆ ಲಭ್ಯವಿರುವ ಆನೆಗಳನ್ನು ದಸರಾದಲ್ಲಿ ಜೋಡಿಸಿಕೊಳ್ಳುವುದರ ಪರಿಣಾಮ ಅನಾಹುತಗಳು ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲಿ ದಸರಾ ಸಂಭ್ರಮದಲ್ಲಿ ಬೆಳ್ಳಿ ಅಂಬಾರಿ ಹೊತ್ತು ಸೋಮಣ್ಣ ಆನೆ ಮೆರವಣಿ ವೇಳೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಾಟುತ್ತಿದಂತೆ ಮಾವುತನ ಆಜ್ಞೆಯನ್ನು ಬಿಟ್ಟು ಅಡ್ಡಾದಿಡ್ಡಿ ಓಡಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿ ಆತಂಕ ಸೃಷ್ಟಿಸಿದ್ದು ಇದಕ್ಕೆ ತಾಜಾ ಉದಾಹರಣೆ.
ಪ್ರಮುಖ ಸವಾಲುಗಳು
* ಮೈಸೂರಿಗೆ ವಿವಿಧ ಜಿಲ್ಲಾ ಕೇಂದ್ರಗಳಿಂದ ಅಧಿಕಾರಿಗಳ ನಿಯೋಜನೆ
* ಲಕ್ಷಾಂತರ ಜನರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಪೊಲೀಸರು ಹೈರಾಣ
* ಬೇರೆ ಬೇರೆ ಜಿಲ್ಲೆಗಳಲ್ಲೂ ದಸರಾಚರಣೆಯಿಂದ ಭದ್ರತೆಯದ್ದೇ ಚಿಂತೆ
* ಎಲ್ಲ ಕಡೆ ಒಟ್ಟೊಟ್ಟಿಗೆ ಕೆಲಸ ಮಾಡುವುದರಿಂದ ಅಧಿಕಾರಿಗಳಿಗೆ ಒತ್ತಡ
* ಅಂಬಾರಿಗೆ ಆನೆ ಕಳಿಸುವಂತೆ ಅರಣ್ಯಾಧಿಕಾರಿಗಳ ಮೇಲೆ ಒತ್ತಡ
* ತರಬೇತಿ ಪಡೆಯದ ಆನೆ ಬಳಕೆಯಿಂದ ಶಿವಮೊಗ್ಗ ಮಾದರಿ ಅವಘಡ
ಜನರ ತೆರಿಗೆ ಹಣ ಬಳಕೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಅದರದ್ದೇ ಆದ ಮಣ್ಣಿನ ಸೊಗಡಿನ ಸಂಸ್ಕೃತಿ, ಆಚರಣೆ, ಹಬ್ಬ ಇರುತ್ತವೆ. ಆದರೆ ಇದೀಗ ಪ್ರತಿ ಜಿಲ್ಲೆಗಳಲ್ಲೂ ದಸರಾ ಆಚರಣೆಗೆ ಸ್ಥಳೀಯ ಸಚಿವರು ಮತ್ತು ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಇದ್ದಾಗಲೂ ದಸರಾದಲ್ಲಿ ದುಂದು ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಲ್ಯಾಣದಲ್ಲೂ ದಸರಾ ಕೂಗು
ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಮುಂದಿನ ವರ್ಷದಿಂದ ಮೈಸೂರು ಮಾದರಿ ದಸರಾ ಆಚರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ದಸರಾ ಆಚರಣೆ ಶುರುವಾದರೆ ಮೈಸೂರಿನ ದಸರಾದ ವೈಭವ ಕುಗ್ಗಲಿದೆ.
ಪರಂಪರೆ
ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಶುರುವಾರ ದಸರಾ ಮಹೋತ್ಸವ, ಮೈಸೂರು ಮಹಾರಾಜರಿಂದ ಔನ್ನತ್ಯ ಕಂಡಿತು. ಸ್ವಾತಂತ್ರ್ಯಾನಂತರ ರಾಜ್ಯ ಸರ್ಕಾರಗಳು ಈ ಆಚರಣೆಯನ್ನು ಪರಂಪರೆಗೆ ಅನುಗುಣವಾಗಿ ಮುಂದುವರಿಸಿಕೊಂಡು ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ದಸರಾ ನೆಪದಲ್ಲಿ ಅಂಬಾರಿ, ಜಂಬೂಸವಾರಿ ಎಲ್ಲದರಲ್ಲೂ ಮೈಸೂರಿನ ಅನುಕರಣ ಮಾಡುವ ಮೂಲಕ ನಾಡಹಬ್ಬದ ಮಹತ್ವ ತಗ್ಗಿಸಿದಂತಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.