ನಾ.ಡಿಸೋಜ ಅಂತ್ಯಕ್ರಿಯೆ ಇಂದು

na dsoza
ಸಾಗರದಲ್ಲಿ ನಾ.ಡಿಸೋಜ ಅವರ ಸ್ವಗೃಹದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
Published on

ಸಾಗರ: ನಾಡಿನ ಹಿರಿಯ ಸಾಹಿತಿ ಡಾ. ನಾ.ಡಿಸೋಜ ಅವರ ಪಾರ್ಥಿವ ಶರೀರ ಸೋಮವಾರ ಮಧ್ಯಾಹ್ನ 2 ಗಂಟೆಗೆ ನೆಹರು ನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಸಿದರು. ವಿವಿಧ ಸಂಘಟನೆಗಳ ಪ್ರಮುಖರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.

ತಾಲೂಕು ಆಡಳಿತದ ಪರವಾಗಿ ಉಪವಿಭಾಗಾಧಿಕಾರಿ ಆರ್.ಯತೀಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಮತ್ತಿತರ ಅಧಿಕಾರಿಗಳು ಗೌರವ ಸಲ್ಲಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಹಿತಿ ನಾ.ಡಿಸೋಜ ನಿಧನದಿಂದ ರಾಜ್ಯವು ಓರ್ವ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಸಾಗರದ ಕೀರ್ತಿಯನ್ನು ಜಗದಗಲ ಪಸರಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಮಡಿಕೇರಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಗರದ ಕೀರ್ತಿ ಹೆಚ್ಚಿಸಿದ್ದರು ಎಂದರು.

ಪರಿಸರವಾದಿ, ಸಾಮಾಜಿಕ ಹೋರಾಟಗಾರರಾಗಿ ನಾ.ಡಿಸೋಜ ನೀಡಿದ ಕೊಡುಗೆ ಸ್ಮರಣೀಯ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರ ಆದೇಶಿಸಿದೆ. ಮಕ್ಕಳ ಮೇಲೆ ನಾ.ಡಿ ಅವರಿಗೆ ವಿಶೇಷ ಪ್ರೀತಿ ಇದ್ದುದರಿಂದ ಮಂಗಳವಾರ ನಗರವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲು ಸಾಧ್ಯವೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಾ.ಡಿಸೋಜ ನನ್ನ ಹಿರಿಯ ಸ್ನೇಹಿತರು. ಅವರ ನಿಧನ ಅತ್ಯಂತ ಬೇಸರ ತಂದಿದೆ. ಸಾಗರಕ್ಕೆ ಅವರು ಸಾಹಿತ್ಯ, ಹೋರಾಟದ ಮೂಲಕ ನೀಡಿದ ಕೊಡುಗೆ ಅಪರೂಪದ್ದು. ರಾಜ್ಯ ಓರ್ವ ಉತ್ತಮ ಬರಹಗಾರರನ್ನು ಕಳೆದುಕೊಂಡಂತಾಗಿದೆ ಎಂದರು.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಇಂದು: ಶಾಸಕ, ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ನಾ. ಡಿಸೋಜ ಅವರ ಅಂತಿಮ ದರ್ಶನಕ್ಕೆ ನಗರಸಭೆ ರಂಗಮಂದಿರದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಾ.ಡಿಸೋಜ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ. ನಾಳೆ ನಗರಸಭೆ ರಂಗಮಟದಿರದಲ್ಲಿ ಡಿಸೋಜ ಅವರ ಅಂತಿಮ ದರ್ಶನದ ಸಂದರ್ಭದಲ್ಲಿ ಪೊಲೀಸ್ ಸಲ್ಯೂಟ್ ಜತೆ ಸರ್ಕಾರಿ ಗೌರವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net