

100ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅಜ್ಜಿಯನ್ನು ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಆಕೆಯಿದ್ದ ವೃದ್ಧಾಶ್ರಮಕ್ಕೆ ಆಗಮಿಸಿದ ಪೊಲೀಸರು, ಕೈಗೆ ಕೋಳ ಹಾಕಿ, ಕಾರಿನಲ್ಲಿ ಕೂರಿಸಿಕೊಂಡು ಸ್ಟೇಶನ್ಗೆ ಕರೆದುಕೊಂಡು ಹೋದ ಘಟನೆ ಯುಎಸ್ನಲ್ಲಿ ನಡೆದಿದೆ...!
ಇಷ್ಟೆಲ್ಲ ಮಾಡಿದ್ದು ಅಜ್ಜಿ ಅಪರಾಧ ಮಾಡಿದ್ದಾರೆ ಎಂದು ಅಲ್ಲ. ಅವರದ್ದೇ ಆಸೆಯನ್ನು ನೆರವೇರಿಸಿದ್ದಾರೆ ಅಷ್ಟೇ. ರುತ್ ಬ್ರ್ಯಾಂಟ್ ಎಂಬ ವೃದ್ಧೆ 100 ನೇ ವರ್ಷದ ಹುಟ್ಟುಹಬ್ಬದಂದು ತಮ್ಮ ಜೀವಮಾನದ ಆಸೆಯನ್ನು ಪೊಲೀಸರ ಮೂಲಕ ಈಡೇರಿಸಿಕೊಂಡಿದ್ದಾರೆ.
ಬ್ರ್ಯಾಂಟ್ ತಮ್ಮ ನೂರನೇ ಬರ್ತ್ ಡೇ ನಿಮಿತ್ತ ಜೈಲಿಗೆ ಹೋಗಬೇಕು ಎಂದು ಬಯಸಿದ್ದರು. ಈ ಆಸೆಯನ್ನು ಕೇಳಿ ಅಲ್ಲಿದ್ದವರು ಹೌಹಾರಿದರೂ ಕೂಡ ಅದನ್ನು ಈಡೇರಿಸಲಾಯಿತು. ಅಜ್ಜಿ ಇದ್ದ ನೆರವು ಕೇಂದ್ರಕ್ಕೆ ಬಂದ ಇಬ್ಬರು ಪೊಲೀಸರು, ಆಕೆಯ ವಾಕರ್ ಮತ್ತು ಕೈ ಸೇರಿ ಕೋಳ ತೊಡಿಸಿದರು. ಹಾಗೇ ಅಜ್ಜಿಯನ್ನು ಪೊಲೀಸ್ ಕಾರಿನಲ್ಲಿ ಕೂರಿಸಿಕೊಂಡು, ಥೇಟ್ ಕೈದಿಯನ್ನು ಕರೆದುಕೊಂಡು ಹೋಗುವಂತೆ, ಕಾರಿನ ದೀಪವನ್ನು ಹೊತ್ತಿಸಿಕೊಂಡು, ಸೈರನ್ ಮಾಡುತ್ತ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.
ಈ ಅಜ್ಜಿ ಕೂಡ ತಾನೂ ನಿಜವಾಗಿಯೂ ಅರೆಸ್ಟ್ ಆಗುತ್ತಿದ್ದೇನೆ ಎಂದೆನ್ನಿಸುವಂತೆ ಸಖತ್ ನಾಟಕ ಆಡಿದ್ದಾರೆ. ಬಂಧಿಸಲು ಬಂದ ಪೊಲೀಸರಿಗೆ ಫನ್ನಿಯಾಗಿ ಒದ್ದಿದ್ದಾರೆ. ಆದರೆ ಅದರಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಮೊಣಕಾಲು ನೋವು ಇರುವ ಕಾರಣ, ವೃದ್ಧೆಯ ಒದೆ ಸಿಕ್ಕಾಪಟೆ ಇರಿಟೇಟ್ ಮಾಡಿದೆ. ಹೀಗೆಲ್ಲ ಒದೆಯಬೇಡಿ. ನನಗೆ ಒಂದು ಕಾಲಿನ ಮಂಡಿ ನೋವಿದೆ ಎಂದು ಆತ ವಾರ್ನ್ ಬೇರೆ ಮಾಡಿದ್ದಾನೆ. ಅದಕ್ಕೆ ಪ್ರತಿಯಾಗಿ ಅಜ್ಜಿ, ನನಗೆ ಎರಡೂ ಕಾಲುಗಳ ಮಂಡಿ ನೋವಿದೆ ಎಂದು ಉತ್ತರಿಸಿದ್ದಾರೆ.
ರುತ್ ಬ್ರ್ಯಾಂಟ್ ಸ್ವಲ್ಪ ಸಮಯ ಜೈಲಿನಲ್ಲಿ ಕಳೆದು ಫೋಟೋವನ್ನು ತೆಗೆದುಕೊಂಡರು. ಬಳಿಕ ಪರ್ಸನ್ ಕೌಂಟಿ ಜೈಲ್ ಎಂದು ಬರೆದುಕೊಂಡಿದ್ದ ಕಿತ್ತಳೆ ಬಣ್ಣದ ಟಿ ಶರ್ಟ್ ಧರಿಸಿಕೊಂಡು ವಾಪಸ್ ಬಂದಿದ್ದಾರೆ. ಹೀಗೆ ವೃದ್ಧೆ ಮರಳಿ ನೆರವು ಕೇಂದ್ರಕ್ಕೆ ಹೋಗುವಾಗ ಪೊಲೀಸರು ಕೇಕ್ ಕೂಡ ಕೊಟ್ಟು ಕಳಿಸಿದ್ದಾರೆ. (ಏಜೆನ್ಸೀಸ್)