

ದಸರಾ ದೀಪಾಲಂಕಾರ ನೋಡಲು ಆಟೋದಲ್ಲಿ ಹೊರಟ ಸಚಿವ ಕೃಷ್ಣ ಭೈರೇಗೌಡ.
ಬೆಂಗಳೂರಿನಿಂದ ರೈಲಿನಲ್ಲಿ..ಮೈಸೂರಿನಿಂದ ಆಟೋದಲ್ಲಿ ಪ್ರಯಾಣ.
ಕರ್ನಾಟಕದ ಸಾಂಸ್ಕೃತಿಕ ವೈಭವ, ನಾಡಿನ ಏಕತೆ ಸಾರುವ ಈ ಅದ್ಧೂರಿ ಆಚರಣೆಯ ಭಾಗವಾಗಲು ಸಂತಸವಾಗುತ್ತಿದೆ.
ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ಸರಳತೆ ಮತ್ತು ಪ್ರಾಮಾಣಿಕತೆ ನೇರ ಮಾತಿಗೆ ಹೆಸರುವಾಸಿ. ರಾಜಕೀಯ ವಲಯದಲ್ಲಿ ಮಿಸ್ಟರ್ ಕ್ಲೀನ್ ಚಿಟ್ ಎಂದು ಎನಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣ ಪಡೆದಿದ್ದರೂ ಸಹ, ಅಧಿಕಾರದ ಹಮ್ಮು-ಬಿಮ್ಮುಗಳಿಲ್ಲದೆ ಜನರೊಟ್ಟಿಗೆ ಅವರು ಬೆರೆಯುವ ರೀತಿಯು ಹಲವು ಬಾರಿ ಮೆಚ್ಚುಗೆಗೆ ಕಾರಣವಾಗಿದೆ. ಇದರಂತೆ ಮೈಸೂರಿಗೆ ಅವರು ಆಟೋದಲ್ಲಿ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.
ಸಚಿವ ಕೃಷ್ಣ ಭೈರೇಗೌಡ ಅವರು ವಿಶೇಷ ಭದ್ರತೆ ಇಲ್ಲದೆ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ನಡೆದು ಬಂದ ಉದಾಹರಣೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳುವಾಗ ಬಿಎಂಟಿಸಿ ವಜ್ರ ಬಸ್ ತೆರಳಿರುವುದು ಹಾಗೂ ಸೈಕಲ್ ಪ್ರಯಾಣ, ರೈಲಿನಲ್ಲಿ ಯಾರ ಸಹಾಯವು ಇಲ್ಲದೆ ಪ್ರಯಾಣಿಸುವ ಮೂಲಕ ಅವರು ಗಮನ ಸೆಳೆದಿದ್ದರು. ಸದ್ಯ ನಾಡ ಹಬ್ಬ ದಸರಾ ನೋಡಲು ಆಟೋದಲ್ಲಿ ತೆರಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಬೆಂಗಳೂರಿನಿಂದ ರೈಲಿನಲ್ಲಿ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸಿದ ಅವರು, ಅಲ್ಲಿಂದ ಅರಮನೆಗೆ ಆಟೋದಲ್ಲಿ ಸಾಮಾನ್ಯ ಜನರಂತೆ ದಸರಾ ದೀಪಾಲಂಕಾರವನ್ನು ವೀಕ್ಷಿಸಲು ಆಟೋದಲ್ಲಿ ಪ್ರಯಾಣಿಸಿದ್ದಾರೆ. ಜೊತೆಗೆ ವಿವಿಧ ಸ್ಥಳಗಳನ್ನು ಅವರು ಕಣ್ತುಂಬಿಕೊಂಡಿದ್ದಾರೆ. ಅವರು ಆಟೋದಲ್ಲಿ ಕುಳಿತಿರುವ ವಿಡಿಯೋಗಳನ್ನು ಹಲವರು ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಮೈಸೂರು ದಸರಾ ಕೇವಲ ಒಂದು ಹಬ್ಬವಲ್ಲ. ಇದು ಕರ್ನಾಟಕದ ಶ್ರೀಮಂತ ಪರಂಪರೆ, ಸುದೀರ್ಘ ಸಂಸ್ಕೃತಿ ಮತ್ತು ನಾಡಿನ ಜನರ ಹೆಮ್ಮೆಯ ಸಂಭ್ರಮದ ಪ್ರತೀಕ. ಐತಿಹಾಸಿಕ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿನತ್ತ ಪ್ರಯಾಣಿಸುತ್ತಿದ್ದು, ಕರ್ನಾಟಕದ ಸಾಂಸ್ಕೃತಿಕ ವೈಭವ, ಸಂಪ್ರದಾಯ ಮತ್ತು ನಾಡಿನ ಏಕತೆಯನ್ನು ಸಾರುವ ಈ ಅದ್ಧೂರಿ ಆಚರಣೆಯ ಭಾಗವಾಗಲು ಸಂತಸವಾಗುತ್ತಿದೆ' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ನೋಡಲು ದೇಶ-ವಿದೇಶದಿಂದ ಜನರ ದಂಡೇ ಆಗಮಿಸುತ್ತದೆ. ರಸ್ತೆಗಳು ಕಾರು ಮತ್ತು ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಪ್ರತಿ ಗಲ್ಲಿಗಳು, ರಸ್ತೆಗಳು ಜನರು, ವ್ಯಾಪಾರ, ಫೋಟೋ ಶೂಟ್ಗಳಿಂದ ಬಿಜಿಯಾಗಿರುತ್ತದೆ. ಇಂತಹ ಸಮಯದಲ್ಲಿ ಸಚಿವರು ಯಾವುದೇ ಪ್ರಾಣಾಪಾಯವಿಲ್ಲದೆ ಪ್ರಯಾಣಿಸಿರುವುದು ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.