ವಿರೋಧದ ಮಧ್ಯೆಯೂ ಬೆಂಗ್ಳೂರು-ಮೈಸೂರು ಹೆದ್ದಾರಿ ಟೋಲ್​ ಸಂಗ್ರಹ ಆರಂಭ: ಪ್ರತಿಭಟನಾಕಾರರ ಬಂಧನ

MYS-BNG Toll
Published on

ಬೆಂಗಳೂರು: ಭಾರೀ ವಿರೋಧದ ನಡುವೆಯೂ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್​ ಸಂಗ್ರಹ ಆರಂಭವಾಗಿದೆ. ಕಾಂಗ್ರೆಸ್​ ಮತ್ತು ಕನ್ನಡಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತ ಟೋಲ್​​​ಗೇಟ್ ಮುರಿದು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಕನ್ನಡ ಸಂಘಟನೆ ಮುಖಂಡರನ್ನು ಪೊಲೀಸರು ಬಂಧಿಸಿದರು. ಕನ್ನಡ ಪರ ಸಂಘಟನೆಯ ಹೋರಾಟಕ್ಕೆ ವಕೀಲರು ಸಹ ಸಾಥ್ ನೀಡಿದರು.

ಇನ್ನು ಟೋಲ್​ಗೇಟ್​ ವೇಳೆ ಫಾಸ್ಟ್​ಟ್ಯಾಗ್ ಇಲ್ಲದೆ ಕ್ಯಾಶ್ ಪೇಮೆಂಟ್ ಬಳಕೆ ಮಾಡಿದ್ರೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಪ್ಪು ಪಟ್ಟಿ ಪ್ರದರ್ಶನ ಮಾಡಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ಸಹ ನಡೆಯಿತು. ಬಳಿಕ ಪ್ರತಿಭಟನಾಕಾರನ್ನು ಪೊಲೀಸರು ತಡೆದರು. ಶೇಷಗಿರಿ ಹಳ್ಳಿಯ ಎಕ್ಸಿಟ್ ಗೇಟ್ ಬಳಿ ಗಲಾಟೆ ನಡೆಯಿತು.

ಸರ್ವೀಸ್ ರಸ್ತೆ ಕಾಮಗಾರಿ ಬಾಕಿ ನಡುವೆಯೂ ಟೋಲ್ ಸಂಗ್ರಹ ಆರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ಟೋಲ್ ವಸೂಲಿ ಆರಂಭವಾಗಿದ್ದು, ಬೆಂಗಳೂರಿನಿಂದ ನಿಢಘಟ್ಟವರೆಗಿನ 56 ಕಿ.ಮೀಗೆ ಟೋಲ್ ಪಾವತಿ ಮಾಡಿ ಸವಾರರು ಸಂಚಾರ ಮಾಡಬೇಕಿದೆ. ಸರ್ವೀಸ್ ರಸ್ತೆ ಕಾಮಗಾರಿ ಮುಕ್ತಾಯವಾಗದ ಹಿನ್ನೆಲೆ, ಎಲಿವೇಟೆಡ್ ರಸ್ತೆಯಲ್ಲೇ ಬೈಕ್, ಆಟೋ, ಟ್ರ್ಯಾಕ್ಟರ್ ಕೂಡ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆ ಮಾರ್ಚ್ 1ರಿಂದ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಮಾಡಿತ್ತು. ಸರ್ವೀಸ್ ರಸ್ತೆ ಕಾಮಗಾರಿ ಬಾಕಿ ಹಿನ್ನೆಲೆ ಟೋಲ್ ಸಂಗ್ರಹಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ 14 ದಿನಗಳ ಕಾಲಾವಕಾಶ ನೀಡಿತ್ತು. ಈಗ ಮತ್ತೆ ಸರ್ವೀಸ್ ರಸ್ತೆ ಕಾಮಗಾರಿ ಸಂಪೂರ್ಣವಾಗುವ ಮುನ್ನ ಟೋಲ್ ವಸೂಲಿಗೆ ಆದೇಶಿಸಿದೆ.

ಯಾವ್ಯಾವ ವಾಹನಳಿಗೆ ಎಷ್ಟು ದರ ನಿಗಧಿ

1. ಕಾರು,ಜೀಪ್,ವ್ಯಾನ್: ಏಕಮುಖ ಸಂಚಾರಕ್ಕೆ 135 ರೂ, ದ್ವಿಮುಖ ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಮತ್ತು ತಿಂಗಳ ಪಾಸ್​ 4525 ರೂ.

2 ಲಘುವಾಹನ, ಮಿನಿಬಸ್: ಏಕಮುಖ ಸಂಚಾರಕ್ಕೆ 220 ರೂ., ದ್ವಿಮುಖ ಸಂಚಾರಕ್ಕೆ 330 ರೂ., ಸ್ಥಳೀಯ ವಾಹನಗಳಿಗೆ 110 ರೂ. ಮತ್ತು ತಿಂಗಳ ಪಾಸ್​ 7315 ರೂ.

3. ಬಸ್, ಟ್ರಕ್: ಏಕಮುಖ ಸಂಚಾರಕ್ಕೆ 460, ದ್ವಿಮುಖ ಸಂಚಾರಕ್ಕೆ 690, ಸ್ಥಳೀಯ ವಾಹನಗಳಿಗೆ 230 ಮತ್ತು ತಿಂಗಳ ಪಾಸ್​ 15,325 ರೂ.

4. ಮೂರು ಆಕ್ಸೆಲ್ ವಾಹನ: ಏಕಮುಖ ಸಂಚಾರಕ್ಕೆ 500 ರೂ., ದ್ವಿಮುಖ ಸಂಚಾರಕ್ಕೆ 750, ಸ್ಥಳೀಯ ವಾಹನಗಳಿಗೆ 250 ರೂ. ಮತ್ತು ತಿಂಗಳ ಪಾಸ್​ 16,167 ರೂ.

5. ಭಾರಿ ನಿರ್ಮಾಣ ವಾಹನ: ಏಕಮುಖ ಸಂಚಾರಕ್ಕೆ 720 ರೂ., ದ್ವಿಮುಖ ಸಂಚಾರಕ್ಕೆ 1080 ರೂ., ಸ್ಥಳೀಯ ವಾಹನಗಳಿಗೆ 360 ರೂ. ಮತ್ತು ತಿಂಗಳ ಪಾಸ್​ 24,030 ರೂ.

6. ಅತಿಗಾತ್ರದ ವಾಹನ: ಏಕಮುಖ ಸಂಚಾರ 880 ರೂ., ದ್ವಿಮುಖ ಸಂಚಾರಕ್ಕೆ 1315, ಸ್ಥಳೀಯ ವಾಹನಗಳಿಗೆ 440 ರೂ. ಮತ್ತು ತಿಂಗಳ ಪಾಸ್​ 29255 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net