

ಬೆಂಗಳೂರು: ಮಂಡ್ಯ ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ ಮೈಶುಗರ್ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ಖಾಸಗೀಕರಣ ಮಾಡುವುದಿಲ್ಲ. ನಮ್ಮ ಸರ್ಕಾರ ರೈತರ ಹಿತ ಕಾಯಲು ಬದ್ಧವಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಈ ಕಾರ್ಖಾನೆ ಸಂಪೂರ್ಣವಾಗಿ ನಷ್ಟದಲ್ಲಿದ್ದಿದ್ದಲ್ಲದೆ, ಮುಚ್ಚಿ ಹೋಗುವ ಹಂತದಲ್ಲಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಮನವಿ ಮಾಡಿದ್ದೆವು. ಕಳೆದ ವರ್ಷ ಕಾರ್ಖಾನೆಗೆ 50 ಕೋಟಿ ರೂಪಾಯಿಯನ್ನು ಕಾರ್ಖಾನೆಯ ಕಾರ್ಯಗಳಿಗೆ ಬಿಡುಗಡೆ ಮಾಡಿಸಲು ಯಶಸ್ವಿಯಾಗಿದ್ದೆವು. ಪರಿಣಾಮ ಕಾರ್ಖಾನೆ ಕಳೆದ ಹಂಗಾಮಿನಲ್ಲಿ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ಅರೆದಿತ್ತು. ಮಾತ್ರವಲ್ಲ ರೈತರಿಗೆ ಕಬ್ಬಿನ ಬಿಲ್‌ನ ಸಂಪೂರ್ಣ ಹಣ ಪಾವತಿಸಲಾಗಿತ್ತು. ಈ ಬಾರಿ ಕಾರ್ಖಾನೆಯು ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೆಯೇ ಕಬ್ಬನ್ನು ನುರಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವರ್ಷ 2 ಲಕ್ಷದ 1 ಸಾವಿರದ 850 ಟನ್ ಕಬ್ಬನ್ನು ಅರೆಯಲಾಗಿದೆ. ಸುಮಾರು 3400ರಷ್ಟು ರೈತರು ಕಬ್ಬು ಪೂರೈಕೆ ಮಾಡಿದ್ದರು. ಎಲ್ಲ ರೈತರಿಗೆ ಶೇಕಡ 100 ರಷ್ಟು ಬಿಲ್ ಪಾವತಿ ಮಾಡಲಾಗಿದೆ. ಮಾತ್ರವಲ್ಲ ಕಳೆದ 20 ವರ್ಷಗಳಿಂದ ಬಾಕಿ ಇದ್ದ 52.25 ಕೋಟಿ ವಿದ್ಯುತ್ ಬಿಲ್ ಬಾಕಿಯನ್ನು ಸಹ ಸರ್ಕಾರ ಮನ್ನಾ ಮಾಡಿದೆ ಎಂದು ವಿವರಿಸಿದ್ದಾರೆ.
ಕಾರ್ಖಾನೆಯನ್ನು ಖಾಸಗೀಕರಣ ಮಾಡುವಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಇದು ಖಂಡಿತಾ ಅಪಪ್ರಚಾರವಾಗಿದೆ. ರಾಜ್ಯದಲ್ಲಿ ಇರುವ 72 ಸಕ್ಕರೆ ಕಾರ್ಖಾನೆಗಳಲ್ಲಿ ಮೈಶುಗರ್ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾಗಿದೆ. ಮೈಶುಗರ್ ಉಳಿವಿಗೆ ಸರ್ಕಾರ ಸಿದ್ಧವಿದೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.