ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಹರಡಿದ ನಿಗೂಢ ವಿಷಾನಿಲಕ್ಕೆ 14 ಬಲಿ, ಹಲವರು ಅಸ್ವಸ್ಥ

Keamari poison gas 18 FEB 20
Published on

ಕರಾಚಿ: ಬಂದರು ನಗರಿ ಕರಾಚಿಯಲ್ಲಿ ನಿಗೂಢ ವಿಷಾನಿಲ ಹರಡಿದ ಪರಿಣಾಮ 14 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಾಚಿಯ ಕೇಮಾರಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದ್ದು, ಅನೇಕರು ಗಂಭೀರ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಎಲ್ಲರನ್ನೂ ಕೂಡಲೇ ಸಮೀಪದ ಜಿಯಾವುದ್ದೀನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ವಕ್ತಾರ ಆಮೀರ್​ ಶೆಹಜಾದ್ ಹೇಳುವ ಪ್ರಕಾರ, ಕಳೆದ ಎರಡು ದಿನಗಳ ಅವಧಿಯಲ್ಲಿ ಆಸ್ಪತ್ರೆ ದಾಖಲಾದವರ ಪೈಕಿ 9 ಜನ ಸಾವನ್ನಪ್ಪಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೌಟಿನ್ಯ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ಇನ್ನೂ ಮೂವರು ಮೃತ ಪಟ್ಟಿದ್ದು ಮೃತರ ಸಂಖ್ಯೆ 14ಕ್ಕೇರಿದೆ.

ನಗರದ ವಿವಿಧ ಆಸ್ಪತ್ರೆಗಳಲ್ಲಿ ಹಲವರು ಚಿಕಿತ್ಸೆಗಾಗಿ ದಾಖಲಾಗಿದ್ದು, ಪರಿಸ್ಥಿತಿಯ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಇದೇ ವೇಳೆ, ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮೋನ್ ಪ್ರತಿಕ್ರಿಯಿಸಿದ್ದು, ಈ ವಿಷಾನಿಲ ಹರಡುವುದಕ್ಕೆ ಕಾರಣವಾಗಿದ್ದೇನು ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ಮುಂದುವರಿದಿದೆ. ಇದೇ ವೇಳೆ, ಜನರು ಅಸ್ವಸ್ಥರಾಗುವುದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಲು ಡಾಕ್ಟರ್​ಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಸೋಯಾ ಬೀನ್ ಚೀಲಗಳನ್ನು ಹಡಗು ಒಂದರಿಂದ ಅನ್​ಲೋಡ್ ಮಾಡುವಾಗ ಅಥವಾ ಅಂಥ ಯಾವುದಾದರೂ ವಸ್ತುವನ್ನು ಅನ್ಲೋಡ್ ಮಾಡುವಾಗ ವಿಷಾನಿಲ ಹರಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಕರಾಚಿಯ ಕಮಿಷನರ್​ ಇಫ್ತಿಖಾರ್ ಶಲ್ವಾನಿ, ಸದ್ಯ ಹಡಗಿನಿಂದ ಅನ್ಲೋಡ್ ಮಾಡುವ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇಫ್ತಿಖಾರ್ ಹೇಳಿಕೆಯನ್ನು ಜಲವ್ಯವಹಾರಗಳ ಸಚಿವ ಅಲಿ ಜೈದಿ ತಳ್ಳಿಹಾಕಿದ್ದು, ಒಂದೊಮ್ಮೆ ಹಡಗಿನಿಂದ ವಿಷಾನಿಲ ಹರಡಿದ್ದರೆ ಅದರಲ್ಲಿರುವ ಸಿಬ್ಬಂದಿ ಹೇಗೆ ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಮರುಪ್ರಶ್ನಿಸಿದ್ದಾರೆ. ಇದೇ ವೇಳೇ, ಸಿಂಧ್​ನ ಮುಖ್ಯಮಂತ್ರಿ ಮುರಾದ್ ಅಲಿ ಷಾ ಅವರು, ಈ ದುರಂತದ ಬಗ್ಗೆ ಆದ್ಯತೆ ಮೇರೆಗೆ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಕರಾಚಿ ಪೊಲೀಸ್ ಕಮಿಷನರ್​ಗೆ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net