ಶಕ್ತಿ ಎಫೆಕ್ಟ್‌ ನಡುವೆಯೂ ಮೈಸೂರು ರೈಲ್ವೆ ಆದಾಯದಲ್ಲಿ ಟಾಪ್

shimoga railway station
ಶಿವಮೊಗ್ಗದ ರೈಲ್ವೆ ನಿಲ್ದಾಣ
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ನಿಲ್ದಾಣವು 67.61 ಕೋಟಿ ರೂ. ಆದಾಯ ಗಳಿಸುವ ಮೂಲಕ ಮೈಸೂರು ವಿಭಾಗದ ಟಾಪ್ 10ರಲ್ಲಿ ಮೊದಲ ಸ್ಥಾನ ಪಡೆದಿದೆ. ಕೇವಲ ಐದು ತಿಂಗಳಲ್ಲಿ ಟಿಕೆಟ್ ಮಾರಾಟದಿಂದಲೇ ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ.

ಮೈಸೂರು ವಿಭಾಗ ವ್ಯಾಪ್ತಿಯಲ್ಲಿ 119 ರೈಲ್ವೆ ನಿಲ್ದಾಣಗಳಿವೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ ಬಳಿಕ ರೈಲ್ವೆ ಸಂಪರ್ಕದ ಮೇಲೂ ಸ್ವಲ್ಪ ಪರಿಣಾಮ ಬೀರಿದ್ದರೂ ಇಲಾಖೆ ಕೈಗೊಂಡ ಸೂಕ್ತ ಕ್ರಮಗಳಿಂದ ಜನರು ರೈಲ್ವೆ ಪ್ರಯಾಣವನ್ನು ಯಥಾಪ್ರಕಾರ ಮುಂದುವರಿಸಿದ್ದಾರೆ.
ನೈಋತ್ಯ ವಲಯದ ಆರು ಮಾದರಿಯ ನಿಲ್ದಾಣಗಳಲ್ಲಿ ಮೈಸೂರು ವಿಭಾಗವು ಎನ್‌ಎಸ್‌ಜಿ(ನಾನ್ ಸಬರ್ಬನ್)-2ರಡಿ ಬರುತ್ತದೆ. ಮೈಸೂರು ವಿಭಾಗದ ರೈಲ್ವೆ ನಿಲ್ದಾಣಗಳ ಪೈಕಿ 80ಕ್ಕೂ ಅಧಿಕ ಕಮರ್ಷಿಯಲ್ ಇವೆ. ಪಾರ್ಸೆಲ್ ಹೊರತುಪಡಿಸಿ ಕೇವಲ ಟಿಕೆಟ್ ಸಂಗ್ರಹದಲ್ಲೇ ಕೋಟ್ಯಂತರ ರೂ. ಆದಾಯ ಗಳಿಸಿರುವುದರಲ್ಲಿ ಮೈಸೂರು ರೈಲ್ವೆ ನಿಲ್ದಾಣ ಮುಂಚೂಣಿಯಲ್ಲಿದೆ.
ದಾವಣಗೆರೆಗೂ ಭಾರಿ ಆದಾಯ: ಮೈಸೂರು ಬಿಟ್ಟರೆ ಬೆಣ್ಣೆನಗರಿ ದಾವಣೆಗೆರೆ ನಿಲ್ದಾಣ ಆದಾಯ ಗಳಿಕೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಪ್ರಸಕ್ತ ವರ್ಷ ಮೇವರೆಗೆ 16.36 ಕೋಟಿ ರೂ. ಆದಾಯ ಗಳಿಸಿದೆ. ಮಧ್ಯಕರ್ನಾಟಕದ ಹೃದಯ ಭಾಗದಲ್ಲಿರುವ ದಾವಣಗೆರೆಯು ಉತ್ತರ ಕರ್ನಾಟಕ, ಮಧ್ಯಕರ್ನಾಟಕ ಹಾಗೂ ಹಳೇ ಮೈಸೂರು ಭಾಗ ಮಾತ್ರವಲ್ಲದೆ ಮುಂಬೈ ಸೇರಿ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಈ ನಿಲ್ದಾಣದ ಮೂಲಕ ನೂರಕ್ಕೂ ಅಧಿಕ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಶಿವಮೊಗ್ಗದಲ್ಲಿ 11.11 ಕೋಟಿ ರೂ. ಗಳಿಕೆ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ರೈಲ್ವೆ ನಿಲ್ದಾಣ ಕೂಡ ಪ್ರಯಾಣಿಕರ ಟಿಕೆಟ್ ಮಾರಾಟ ಶುಲ್ಕದಿಂದಲೇ 11.11 ಕೋಟಿ ರೂ. ಆದಾಯ ಗಳಿಸಿದೆ. ಶಿವಮೊಗ್ಗದಿಂದ ಬೆಂಗಳೂರು, ಮೈಸೂರು, ಚೆನ್ನೈಗೂ ರೈಲ್ವೆ ಸಂಪರ್ಕ ಹೊಂದಿದೆ. ಮೈಸೂರು ವಿಭಾಗದಲ್ಲಿ ಆದಾಯ ಗಳಿಕೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಇನ್ನುಳಿದಂತೆ ಅರಸೀಕೆರೆ, ಹಾಸನ, ಹಾವೇರಿ, ಕಡೂರು, ಸುಬ್ರಹ್ಮಣ್ಯ ರಸ್ತೆ, ಬಿರೂರು ಮತ್ತು ಹರಿಹರ ರೈಲ್ವೆ ನಿಲ್ದಾಣಗಳು ಆದಾಯ ಗಳಿಕೆಯಲ್ಲಿ ನಂತರದ ಸ್ಥಾನ ಪಡೆದಿವೆ.

4.73 ಕೋಟಿ ರೂ. ದಂಡ
ಮೈಸೂರು ವಿಭಾಗ ಸೇರಿ ನೈಋತ್ಯ ರೈಲ್ವೆ ವಲಯದಲ್ಲಿ ಟಿಕೆಟ್ ರಹಿತ ಪ್ರಯಾಣದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಮತ್ತು ಪ್ರಯಾಣದ ಟಿಕೆಟ್‌ನಿಂದ ರೈಲ್ವೆ ನಿಲ್ದಾಣಗಳ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ ಆರು ತಿಂಗಳಲ್ಲೇ ಮೈಸೂರು ವಿಭಾಗದ 119 ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ 74,285 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ 4.73 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಏಪ್ರಿಲ್ ಮತ್ತು ಮೇನಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್‌ವೊಂದರಲ್ಲೇ 15,013 ಪ್ರಕರಣ ಪತ್ತೆಯಾಗಿದ್ದು 1.11 ಕೋಟಿ ರೂ. ದಂಡ ವಿಧಿಸಲಾಗಿದೆ.

ಟಾಪ್ 10 ನಿಲ್ದಾಣ-ಆದಾಯ(ಕೋಟಿ ರೂ.ಗಳಲ್ಲಿ)
ಮೈಸೂರು-67.61
ದಾವಣಗೆರೆ-16.36
ಶಿವಮೊಗ್ಗ-11.11
ಅರಸೀಕೆರೆ-9.08
ಹಾಸನ-6.32
ಹಾವೇರಿ-5.59
ಕಡೂರು-4.81
ಸುಬ್ರಹ್ಮಣ್ಯ ರಸ್ತೆ-4.80
ಬಿರೂರು-4.74
ಹರಿಹರ-3.82

ತಿಂಗಳು-ಟಿಕೆಟ್ ರಹಿತ ಪ್ರಯಾಣ-ದಂಡ
ಜನವರಿ-11,709-67,47,545
ಫ್ರೆಬವರಿ-11,434-70,13,107
ಮಾರ್ಚ್-11,499-77,51,340
ಏಪ್ರಿಲ್-15,013-1,11,83,925
ಮೇ-12,811-73,90,9272
ಜೂನ್-11,819-72,63,872
ಒಟ್ಟು -74,285-4,73,50,761

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಮೇಲೂ ಶಕ್ತಿ ಯೋಜನೆ ಪರಿಣಾಮ ಬೀರಿತ್ತು. ಕೆಲವು ಬದಲಾವಣೆ ಕೈಗೊಂಡ ಪರಿಣಾಮ 2024ರ ಜನವರಿಯಿಂದ ಮೇವರೆಗೆ ಪ್ರಯಾಣಿಕರ ಸಂಚಾರದಲ್ಲಿ ಮೈಸೂರು ನಿಲ್ದಾಣ ಮೊದಲ ಸ್ಥಾನದಲ್ಲಿದೆ. ಜನವರಿಯಿಂದ ಜೂನ್‌ವರೆಗೆ 74 ಸಾವಿರ ಟಿಕೆಟ್ ರಹಿತ ಪ್ರಕರಣಗಳಿಂದ 4.73 ಕೋಟಿ ರೂ. ದಂಡ ಸಂಗ್ರಹವಾಗಿದೆ.- ಗಿರೀಶ ಧರ್ಮರಾಜ ಕಲಗೊಂಡ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ಪಿಆರ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net