

ನಂಜನಗೂಡು: ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಹಲವು ಮಹಾಶಯರನ್ನು ಕೊಡುಗೆಯಾಗಿ ನೀಡಿದ ಕೀರ್ತಿಗೆ ಭಾಜನವಾಗಿರುವ ನಂಜನಗೂಡಿನಿಂದ ಮತ್ತಷ್ಟು ಉದಯೋನ್ಮುಖ ಕವಿಗಳ ಉದಯವಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಆಶಿಸಿದರು.
ನಗರದ ಬ್ರಾಹ್ಮಣ ಧರ್ಮ ಸಹಾಯ ಸಭಾದಲ್ಲಿ ಕವಯತ್ರಿ ಶೋಭಾ ನಾಗಶಯನ ರಚಿತ ಕೋಗಿಲೆ ಕೂಗಿದಾಗ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್, ರಾಜ್ಯದ ಮೊದಲ ಕವಯತ್ರಿ ತಿರುಮಲಾಂಬ, ಸಾಹಿತಿ ದೇವನೂರ ಮಹದೇವ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳನ್ನು ನಂಜನಗೂಡು ಕೊಡುಗೆಯಾಗಿ ನೀಡಿದೆ. ಹೀಗೆ ನಾನಾ ವಿಶೇಷತೆಗಳಿಂದ ಕೂಡಿರುವ ನಂಜನಗೂಡಿನಲ್ಲಿ ಭರವಸೆ ಮೂಡಿಸುವ ಸಾಹಿತಿಗಳು ಹೊರಹೊಮ್ಮಲಿ ಎಂದರು.
ಪ್ರಸಕ್ತ ಸಾಲಿನ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಂಜನಗೂಡಿನಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದ್ದು, ಎಲ್ಲ ರೀತಿಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಅಂತಿಮವಾಗಿ ನಂಜನಗೂಡಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ. ಸಾಹಿತ್ಯ ಚಟುವಟಿಕೆಗಳಲ್ಲಿ ಯುವ ಸಮುದಾಯವನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮ್ಮೇಳನ ರೂಪಿಸುವುದಾಗಿ ತಿಳಿಸಿದರು.
ಕೋಗಿಲೆ ಕೂಗಿದಾಗ ಕವನ ಸಂಕಲನವನ್ನು ಕವಯತ್ರಿ ಡಾ.ಲತಾ ರಾಜಶೇಖರ್ ಬಿಡುಗಡೆಗೊಳಿಸಿದರು. ಸಂಕಲನ ಕುರಿತು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಮಾತನಾಡಿದರು. ಸಂಸ್ಕಾರ ಭಾರತಿ ಅಧ್ಯಕ್ಷ ಟಿ.ಎನ್.ಗೋಪಿನಾಥ್, ಕಾರ್ಯದರ್ಶಿ ರಮ್ಯಾ ರಾಘವೇಂದ್ರ, ಲೇಖಕ ನಂಜನಗೂಡು ಸತ್ಯನಾರಾಯಣ, ಕವಯತ್ರಿ ಶೋಭಾ ನಾಗಶಯನ, ಕಸಾಪ ತಾಲೂಕು ಅಧ್ಯಕ್ಷ ಪಿ.ಮಹೇಶ್ ಅತ್ತಿಖಾನೆ ಇದ್ದರು.