

ಮೈಸೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಅಶೋಕಪುರಂನಲ್ಲಿರುವ ಗಂಧದ ಎಣ್ಣೆ ಕಾರ್ಖಾನೆ ಮುಂದೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಕಾರ್ಖಾನೆಗೆ ಒಂದು ಘನತೆ ಇದ್ದು, ಅದನ್ನು ಸರ್ಕಾರ ಕಾಪಾಡಿಕೊಂಡು ಹೋಗಬೇಕು. ಸಾವಿರಾರು ಜನರ ಉದ್ಯೋಗ ನೀಡುತ್ತಿರುವ ಕಾರ್ಖಾನೆಯ ಲಾಭದ ಹಣ ಮೈಸೂರು ಹಾಗೂ ಕನ್ನಡ ಭಾಷೆ ಬಗ್ಗೆ ಗೊತ್ತಿಲ್ಲದ ಒಬ್ಬ ನಟಿ ಪಾಲಾಗುತ್ತಿದೆ ಎಂದರೆ ಸರ್ಕಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡಳಿತ ಮಾಡುತ್ತಿದೆ ಎಂದರ್ಥ ಎಂದು ಟೀಕಿಸಿದರು.
ನಮ್ಮ ರಾಜ್ಯದ ನಟಿಯರೇ ಬೇರೆ ಭಾಷೆಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಕನ್ನಡಿಗರಾದ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ನಿತ್ಯಾ ಮೆನನ್, ಶ್ರೀಲೀಲಾ, ಅಲ್ಲದೆ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಜಯ ಗಳಿಸಿ ಅರ್ಜುನ್ ಪ್ರಶಸ್ತಿ ಪಡೆದ ಅಶ್ವಿನಿ ಪೊನ್ನಪ್ಪ ಸೇರಿದಂತೆ ಇತರ ತಾರೆಯರು ಇದ್ದಾರೆ ಎಂದರು.
ದುಬಾರಿ ಪ್ರೀಮಿಯಂ ಸೋಪು ತಯಾರಿಸಿದ ಕೀರ್ತಿಯೂ ಸ್ಯಾಂಡಲ್ ಕಾರ್ಖಾನೆಗೆ ಸಲ್ಲುತ್ತದೆ. ಈಗಾಗಲೇ ಮೈಸೂರ್ ಸ್ಯಾಂಡಲ್ ದೊಡ್ಡ ಸ್ಟಾರ್ ಆಗಿರುವುದನ್ನು ಸರ್ಕಾರ ಅರಿತುಕೊಳ್ಳಬೇಕು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಷ್ಟು ಮಂದಿ ಉದ್ಯೋಗದಲ್ಲಿ ಇರುವಾಗಲೇ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ್ದಾರೆ. ಅವರ ಮಕ್ಕಳಿಗೆ ಇನ್ನು ಸಹ ಅನುಕಂಪದ ಕೆಲಸ ನೀಡಿಲ್ಲ, ಕೆಲವರಿಗೆ ನೀಡಿರುವ ಪರಿಹಾರದ ಮೊತ್ತ ಕಡಿಮೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇವರಿಗೆ ನಟಿಗೆ ನೀಡುವ ಕೋಟ್ಯಂತರ ರೂ. ಹಣದಲ್ಲಿ ನೀಡಿದ್ದರೆ ಕಾರ್ಖಾನೆಯನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಕುಟುಂಬಕ್ಕೆ ಅನುಕೂಲವಾಗುತ್ತದೆ ಎಂದರು.
ಸೋಪ್ ಬಾಕ್ಸ್, ಕವರ್ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋ ಹಾಕಬೇಕು. ನೊಂದ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಬರಬೇಕಾಗಿರುವ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.
ಅಧ್ಯಕ್ಷ ಎಸ್.ಬಾಲಕೃಷ್ಣ, ದಿ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ, ಮುಖಂಡರಾದ ಗುರುಬಸಪ್ಪ, ಗೋಪಿ, ಪ್ಯಾಲೆಸ್ ಬಾಬು, ಬೋಗಾದಿ ಸಿದ್ದೇಗೌಡ, ಸಿದ್ದಪ್ಪ ಎಲ್ಐಸಿ, ಗೋವಿಂದರಾಜು, ಸ್ವಾಮಿ, ಬೀಡಾಬಾಬು, ಹರೀಶ್, ಮಹದೇವಸ್ವಾಮಿ, ಮಾದಪ್ಪ, ರಮೇಶ್, ಶಿವು, ಸುನಿಲ್, ನಾಗರಾಜು, ಚಂದ್ರು, ಶಿವಪ್ಪ, ರಾಜು ಮಿಲ್ಟ್ರಿ ಚಿನ್ನಪ್ಪ ಇತರರು ಇದ್ದರು.