3 ಕೋಟಿ ರೂ.ಸಾಲ ಮರು ಪಾವತಿ ಆಗಿಲ್ಲ

22HAN-1
ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-2023 ನೇ ಸಾಲಿನ ವಾರ್ಷಿಕ ಸಭೆಯನ್ನು ಅತಿಥಿಗಳು ಉದ್ಘಾಟಿಸಿದರು.
Published on

ಹನಗೋಡು: ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2022-2023ನೇ ಸಾಲಿನಲ್ಲಿ ಬೆಳೆಸಾಲ ಹಾಗೂ ಇತರ ಸಾಲ ಪಡೆದ 209 ರೈತರು ಸುಸ್ತಿದಾರರಾಗಿದ್ದು, ಇವರಿಂದ 3 ಕೋಟಿ ರೂ. ಸಾಲ ಬಾಕಿ ಬರಬೇಕಿದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಪುಷ್ಪಕಲಾ ಹೇಳಿದರು.


ಸಂಘದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, 15.37 ಕೋಟಿ ರೂ.ವ್ಯವಹಾರ ನಡೆಸಿದ್ದರೂ ಸುಸ್ತಿ ಸಾಲದ ಬಡ್ಡಿ ಹಾಗೂ ಹಿಂದಿನ ಸಿಇಒ 45 ಲಕ್ಷ ರೂ.ಹಣ ದುರುಪಯೋಗಪಡಿಸಿಕೊಂಡಿದ್ದರಿಂದ ಉತ್ತಮ ಲಾಭ ಗಳಿಸಲು ಸಾಧ್ಯವಾಗಿಲ್ಲ. ವಿವಿಧ ವಹಿವಾಟುಗಳಿಂದ 1 ಲಕ್ಷ ರೂ.ನಿವ್ವಳ ಲಾಭ ಬಂದಿದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಹಿಂದಿನ ಸಿಇಒ ದಿ.ಬೊಮ್ಮರಾಯಿಗೌಡ ಅವರು ಹಣ ದುರುಪಯೋಗದಿಂದ ಸಂಘದ ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ಜಮೀನು ಹರಾಜು ಹಾಕಲು ಆದೇಶಿಸಿದ್ದು, ಆದೇಶ ಪ್ರತಿ ಬಂದ ಕೂಡಲೇ ಕ್ರಮ ವಹಿಸಲಾಗುವುದೆಂದು ತಿಳಿಸಿದರು. ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸರ್ಕಾರದಿಂದ ಸಿಗುವ ಸಹಾಯಧನ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಆಗ್ರಹ: ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರ, ಮರಣನಿಧಿ ಹಣ ಹೆಚ್ಚಳ ಮಾಡುವಂತೆ ಹಿರಿಯ ಸಹಕಾರಿಗಳಾದ ಹನಗೋಡು ನಟರಾಜ್, ವೆಂಕಟಪ್ಪ ಒತ್ತಾಯಿಸಿದರು.


ಬಡ್ಡಿಮನ್ನಾ ಮಾಡಲು ಒತ್ತಾಯ: ಈ ವರ್ಷ ಮಳೆ ಕಡಿಮೆಯಾಗಿ ರೈತರು ಬೆಳೆದ ಎಲ್ಲ ಬೆಳೆಗಳು ಸರಿಯಾಗಿ ಬಾರದ ಕಾರಣ ಸಂಘದಲ್ಲಿ ಸುಸ್ತಿಯಾಗಿರುವ ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡುವಂತೆ ಹನಗೋಡಿನ ಪುಟ್ಟಸ್ವಾಮಪ್ಪ ಮನವಿ ಮಾಡಿದರು. ಸಂಘದ ನಿರ್ದೇಶಕರಾದ ಎಚ್.ಆರ್.ರಮೇಶ್, ಕಚುವಿನಹಳ್ಳಿ ಲೋಕೇಶ್, ಜವರೇಗೌಡ ಮಾತನಾಡಿದರು.


ಸಂಘದ ನಿರ್ದೇಶಕರಾದ ರಾಮೇಗೌಡ, ಉಜ್ಜನೀಗೌಡ, ಗೀತಾ ಶಿವಣ್ಣ, ಮಹದೇವಯ್ಯ, ಚಂದ್ರನಾಯಕ, ಸದಸ್ಯರಾದ ನಾಗರಾಜಶೆಟ್ಟಿ, ಕೃಷ್ಣೇಗೌಡ, ಗಣಪತಿ, ರಾಜಣ್ಣ, ಮಂಜೇಶ, ಪುಟ್ಟಮಲ್ಲೇಗೌಡ, ಬೀರಪ್ಪ, ಶಿವರಾಜು, ರೇಣುಕಾ, ಪೂಜಾ, ರವಿಚಂದ್ರ, ನೇರಳಕುಪ್ಪೆ ಮಹದೇವ್, ಸಿಬ್ಬಂದಿ ಜಯರಾಮ್, ರೂಪಾ, ಜಮೀಲ್, ಮನೋಜ್, ಮಂಜುನಾಥ್, ಅಕ್ಬರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net