ಕರೊನಾ ಸೋಂಕಿತ ಗರ್ಭಿಣಿ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ

HUN-JUNE-4-11(OFFICIALS VISITED TO HOSAPENJALLI)
Published on

ಹುಣಸೂರು: ಮುಂಬೈನಿಂದ ಹುಣಸೂರಿನ ತವರುಮನೆಗೆ ಬಂದಿದ್ದ 8 ತಿಂಗಳ ಗರ್ಭಿಣಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಗರ್ಭಿಣಿಯನ್ನು ಮೈಸೂರಿನ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಂದು ದಿನ ತನ್ನೂರಿನಲ್ಲಿದ್ದ ಗರ್ಭಿಣಿಯ ತವರೂರು ಹೊಸಪೆಂಜಳ್ಳಿಯ ಸೋಂಕಿತರ ಮನೆಯ ಬೀದಿಯನ್ನು 28 ದಿನಗಳ ಕಾಲ ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ.
ತಾಲೂಕಿನ ಹನಗೋಡು ಹೋಬಳಿ ಹೊಸಪೆಂಜಳ್ಳಿ ಗ್ರಾಮದ ನಿವಾಸಿಯಾಗಿರುವ 28 ವರ್ಷದ ಮಹಿಳೆ 8 ತಿಂಗಳ ಗರ್ಭಿಣಿ. ಇವರ ಪತಿಯ ಮನೆ ಕೆ.ಆರ್.ನಗರದ ಹೆಬ್ಬಾಳ. ಮುಂಬೈನಿಂದ ಜೂ.2 ರಂದು ಸಂಜೆ ಮೈಸೂರಿಗೆ ಆಗಮಿಸಿ ಅಲ್ಲಿ ಗಂಟಲುದ್ರವ ಪರೀಕ್ಷೆ ನಡೆಸಿ, ಹುಣಸೂರಿನ ತಮ್ಮ ತವರು ಮನೆಗೆ 4 ವರ್ಷದ ಕಂದಮ್ಮನೊಂದಿಗೆ ಬಂದಿದ್ದಾರೆ. ಜೂ.3ರಂದು ಸಂಜೆ ಆಕೆಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೂಡಲೇ ಆಕೆಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಸಂಪರ್ಕ ಗುರುತಿಸುವಿಕೆ:
ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಗರ್ಭಿಣಿ ಮಹಿಳೆಯೊಂದಿಗೆ ಪ್ರಾಥಮಿಕ ಸಂಪರ್ಕ ಸಾಧಿಸಿದವರನ್ನು ಗುರುತಿಸಲಾಗುತ್ತಿದೆ. ನಂತರ ಎರಡನೇ ಹಂತದಲ್ಲಿ ಸಂಪರ್ಕ ಸಾಧಿಸಿದವರನ್ನೂ ಗುರುತಿಸಲಾಗುವುದು ಎಂದರು.
ಅಧಿಕಾರಿಗಳ ಭೇಟಿ:
ಕಳೆದ ರಾತ್ರಿಯೇ ಸೋಂಕಿತ ಮಹಿಳೆಯನ್ನು ಮೈಸೂರಿಗೆ ರವಾನಿಸಿದ ನಂತರ ಗುರುವಾರ ಬೆಳಗ್ಗೆ ತಹಸೀಲ್ದಾರ್ ಐ.ಇ.ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಸೋಂಕಿತರ ಮನೆಯ ಬೀದಿ ಸೇರಿ ಅಕ್ಕಪಕ್ಕದ ಬೀದಿಗಳನ್ನು ಬ್ಯಾರಿಕೇಡ್ ಹಾಕುವ ಮೂಲಕ ಸಂಚಾರ ನಿಷೇಧಿಸಲಾಯಿತು.
ತಹಸೀಲ್ದಾರ್ ಬಸವರಾಜು ಮಾತನಾಡಿ, ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರ ಆಕೆಯ ಮನೆಯ ಬೀದಿಯನ್ನು 28 ದಿನಗಳ ಕಾಲ ಕಂಟೈನ್‌ಮೆಂಟ್ ಜೋನ್ ಆಗಿ ಗುರುತಿಸಲಾಗಿದೆ. ಇಲ್ಲಿ ಹೊರಗಿನವರಿಗೆ ಮತ್ತು ಈ ಗ್ರಾಮದ ಇನ್ನಿತರ ಬೀದಿಗಳ ಜನರ ಪ್ರವೇಶಕ್ಕೆ ಅವಕಾಶವಿಲ್ಲ. ಗ್ರಾಮಸ್ಥರಿಗೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿದೆ ಎಂದರು.
ಡಿವೈಎಸ್‌ಪಿ ಕೆ.ಎಸ್.ಸುಂದರರಾಜ್, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಇಒ ಗಿರೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net