

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ.50:50 ಅನುಪಾತ ನಿವೇಶನಗಳ ಹಂಚಿಕೆಯಲ್ಲಿ ಮಾತ್ರವಲ್ಲದೆ ಹಲವು ಅಕ್ರಮಗಳು ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗು ವುದು ಎಂದು ಮೈಸೂರು ಗ್ರಾಹಕ ಪರಿಷತ್ ಅಧ್ಯಕ್ಷ ಭಾಮಿ ಶೆಣೈ ಹೇಳಿದರು.
ಮುಡಾದಲ್ಲಿ ಹಲವಾರು ವರ್ಷಗಳಿಂದ ಹಲವು ಅಕ್ರಮಗಳು ನಡೆದಿವೆ. ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು. ಕೇವಲ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಹಂಚಿಕೆಯಾಗಿರುವ ಬದಲಿ ನಿವೇಶನ ವಿಚಾರವನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸರಿಯಲ್ಲ. ಮುಡಾದಲ್ಲಿ ಹಲವಾರು ಹಗರಣಗಳು ನಡೆದಿದ್ದು, ಆ ಎಲ್ಲ ಹಗರಣಗಳ ಕುರಿತು ಸಹ ರಾಜಕಾರಣಿಗಳು ಧ್ವನಿ ಎತ್ತಬೇಕು. ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮುಡಾದ ಈ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಹಿಂದಿನ ಜಿಲ್ಲಾಧಿಕಾರಿ ಮಣಿವಣ್ಣನ್ ಅವರ ಅವಧಿಯಲ್ಲಿ 200 ನಿವೇಶನಗಳನ್ನು ನಾಗರಿಕ ಬಳಕೆಗೆ ಮೀಸಲಿರಿಸಲಾಗಿತ್ತು. ಆ ಪೈಕಿ ಬಹುತೇಕ ನಿವೇಶನಗಳು ದುರ್ಬಳಕೆಯಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪರಿಷತ್ ಪದಾಧಿಕಾರಿಗಳಾದ ವೆಂಕಟೇಶ್, ಭಾನುಪ್ರಶಾಂತ್, ಬಿ.ಎಸ್. ನಟರಾಜು ಹಾಗೂ ಶೋಭನಾ ಹಾಗೂ ಇತರರು ಇದ್ದರು.