ಮೈಲಾರ ಶುಗರ್ಸ್​ನಿಂದ ರೈತರಿಗೆ ಅನ್ಯಾಯ ಆರೋಪ

27-RNR-10
Published on

ಹಾವೇರಿ: ಮೈಲಾರ ಶುಗರ್ಸ್​ ಕಾರ್ಖಾನೆಯವರು ಕಬ್ಬು ಕೊಟ್ಟಿರುವ ರೈತರಿಗೆ ಹಣ ಕೊಡುವಲ್ಲಿ ವಂಚನೆ ಮಾಡಿದ್ದಾರೆ. ಕೂಡಲೇ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹೊಸರಿತ್ತಿ, ಕೊರಡೂರ, ಚಿನ್ನೂರ, ಮಣ್ಣೂರ ಸೇರಿ ವಿವಿಧ ಗ್ರಾಮಗಳ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಬಹಳಷ್ಟು ರೈತರು ಬೆಳೆದ ಕಬ್ಬನ್ನು ಮೈಲಾರ ಶುಗರ್ಸ್​ ಕಾರ್ಖಾನೆಯವರಿಗೆ ನೀಡುತ್ತಾರೆ. ಬೇರೆ ಜಿಲ್ಲೆಗಳಿಗೆ 1 ಕ್ವಿಂಟಾಲ್​ ಕಬ್ಬಿಗೆ 3100 ರೂ. ದರ ನೀಡಿ ಅವರಿಗೆ ಸ್ಥಳದಲ್ಲೇ ಹಣ ನೀಡುತ್ತಾರೆ. ಅಲ್ಲದೆ ಕಬ್ಬು ಕಟ್ಟಿಂಗ್​ ಚಾರ್ಜ್​ಗಾಗಿ ಶೇ. 4ರಷ್ಟು ಹಣ ಪಡೆಯುತ್ತಾರೆ. ಆದರೆ, ಮೈಲಾರ್​ ಶುಗರ್ಸ್​ ಕಾರ್ಖಾನೆಯವರು ಕಬ್ಬು ಕಟಿಂಗ್​ಗಾಗಿ ಶೇ. 8ರಷ್ಟು ಹಣ ಪಡೆದುಕೊಳ್ಳುತ್ತಿದ್ದಾರೆ.

ಸರ್ಕಾರದ ಆದೇಶದಂತೆ ಶೇ. 4ರಷ್ಟು ಹಣ ಮಾತ್ರ ಪಡೆಯಬೇಕು. ಆದರೆ, ಮೈಲಾರ್​ ಶುಗರ್ಸ್​ನವರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸಿದ್ದಲಿಂಗಪ್ಪ ಕಲಕೋಟಿ, ವಿರುಪಾಕ್ಷಪ್ಪ ಕಲಕೋಟಿ, ಪ್ರಭು ಗೌರಿಮನೆ, ಮಂಜುನಾಥ ಗಾಣಗೇರ, ವೆಂಕಟೇಶ ಆವಿನ, ಮೌನೇಶ ಕಮ್ಮಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net